ಕಾಶ್ಮೀರ ವಿಷಯದಲ್ಲಿ ಪಾಕ್‍ಗೆ ಯಾವುದೇ ಹಕ್ಕಿಲ್ಲ : ರಾಜನಾಥ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಲೇಹ್, ಆ.29- ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟ ಮಾತುಗಳಲ್ಲಿ ಪುನರುಚ್ಚರಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಈ ವಿಷಯದಲ್ಲಿ ಪಾಕಿಸ್ತಾನ ಯಾವುದೇ ಅಧಿಕಾರ ಅಥವಾ ಹಕ್ಕು ಹೊಂದಿಲ್ಲ ಎಂದು ಸಾರಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸಿದ್ದ ಭಾರತೀಯ ಸಂವಿಧಾನದ 370ನೆ ವಿಧಿ ಅಥವಾ ಅನುಚ್ಛೇದ ರದ್ಧತಿ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪಾಕಿಸ್ತಾನ ಯತ್ನಿಸುತ್ತಿರುವ ಸಂದರ್ಭದಲ್ಲೇ ರಾಜನಾಥ್ ಸಿಂಗ್ ಆ ದೇಶಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ಯಾವ ದೇಶವೂ ಬೆಂಬಲ ನೀಡಿಲ್ಲ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಇದು ನಮ್ಮ ಆಂತರಿಕ ವಿಷಯ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಹೀಗಿದ್ದರೂ ಪಾಕಿಸ್ತಾನ ವಿನಾ ಕಾರಣ ಈ ವಿಷಯವನ್ನು ಕೆದಕಿ ಅಂತಾರಾಷ್ಟ್ರೀಕರಣಗೊಳಿಸಲು ಯತ್ನಿಸುತ್ತಿದೆ. ಈ ಯತ್ನದಲ್ಲಿ ಆ ದೇಶ ಸಫಲವಾಗದು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಲೇಹ್‍ನಲ್ಲಿ ರಕ್ಷಣಾ ಇಲಾಖೆ ಆಯೋಜಿಸಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಸಮಾರಂಭವೊಂದರಲ್ಲಿ ಮಾತನಾಡಿದ ರಾಜನಾಥ ಸಿಂಗ್ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಾಕಿಸ್ತಾನದೊಂದಿಗೆ ನಾವು ವ್ಯವಹರಿಸಲು ಹೇಗೆ ತಾನೆ ಸಾಧ್ಯ ಎಂದು ಪ್ರಶ್ನಿಸಿದ ಸಿಂಗ್ ನಾವು ನೆರೆ ಹೊರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಆದರೆ ಪಾಕಿಸ್ತಾನ ಭಾರತದ ವಿರುದ್ಧ ಉಗ್ರಗಾಮಿಗಳನ್ನು ಎತ್ತಿ ಕಟ್ಟುತ್ತಿದೆ ಎಂದು ಆರೋಪಿಸಿದರು.

ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಕೆದಕುವುದನ್ನು ಬಿಟ್ಟು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹಿಂಸಾಚಾರ- ಶೋಷಣೆಯನ್ನು ನಿವಾರಿಸಲು ಗಮನ ಹರಿಸಬೇಕು ಎಂದು ರಕ್ಷಣಾ ಸಚಿವರು ಸಲಹೆ ನೀಡಿದರು.

ಅಮೆರಿಕ ರಕ್ಷಣಾ ಸಚಿವ ಮಾರ್ತ್ ಎಸ್ಪರ್ ತಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. 370ನೆ ವಿಧಿ ರದ್ಧತಿ ಭಾರತಕ್ಕೆ ಸಂಬಂಧಪಟ್ಟ ವಿಷಯ. ಅದರಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ ಎಂದು ತಿಳಿಸಿದ್ದಾರೆ ಎಂಬ ವಿಷಯವನ್ನು ಸಹ ರಾಜನಾಥಸಿಂಗ್ ಸ್ಪಷ್ಟಪಡಿಸಿದರು.

Facebook Comments