ಭಾರತ-ಫ್ರಾನ್ಸ್ ಮಹತ್ವದ ರಕ್ಷಣಾ ಸಂಬಂಧ ವೃದ್ಧಿ : ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್, ಅ.9 (ಪಿಟಿಐ)- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‍ನಲ್ಲಿ ಫ್ರಾನ್ಸ್‍ನ ಸಶಸ್ತ್ರ ಪಡೆಗಳ ಸಚಿವೆ ಫ್ಲೋರೆನ್ಸ್ ಪಾರ್ಲೆ ಅವರೊಂದಿಗೆ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಮಾತುಕತೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.  ಉಭಯ ದೇಶಗಳ ನಡುವೆ ರಕ್ಷಣಾ ಮಾತುಕತೆಯಿಂದ ಮಹತ್ವದ ಸಂಬಂಧ ವೃದ್ಧಿಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನ ಹೋಟೆಲ್ ಡಿ ಬ್ರೀನ್ನೆಯಲ್ಲಿರುವ ಸಶಸ್ತ್ರ ಪಡೆಗಳ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಫ್ರೆಂಚ್ ಸೇನೆ ಸಿಂಗ್ ಅವರಿಗೆ ಮಿಲಿಟರಿ ಗೌರವ ರಕ್ಷೆ ನೀಡಿ ಸ್ವಾಗತಿಸಿತು.

ವಿಜಯದಶಮಿ ದಿನದಂದೇ ಭಾರತೀಯ ವಾಯು ಪಡೆ(ಐಎಎಫ್)ಗೆ ಮೊದಲ ರಫೇಲ್ ಫೈಟರ್ ಜೆಟ್ ಸೇರ್ಪಡೆಯಾದ ಬಳಿಕ ರಾಜನಾಥ್ ಸಿಂಗ್ ಮತ್ತು ಪ್ರೋರೆನ್ಸ್ ಪಾರ್ಲೆ ಎರಡೂ ದೇಶಗಳ ನಡುವಣ ರಕ್ಷಣಾ ಸಹಕಾರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಸಿದರು.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಂಗ್, ಇದು ಇಂಡೋ-ಫ್ರೆಂಚ್ ಮಹತ್ವದ ಸಹಭಾಗಿತ್ವ ಮತ್ತು ಪಾಲುದಾರಿಕೆಯಲ್ಲಿ ಹೊಸ ಮೈಲಿಗಲ್ಲು. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತಷ್ಟು ಎತ್ತರಕ್ಕೆ ತಲುಪಿದೆ. ಈ ಸಾಧನೆಗಳು ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲು ಪ್ರೋತ್ಸಾಹ ನೀಡಿದೆ ಎಂದು ಬಣ್ಣಿಸಿದರು.

Facebook Comments