ನಾಮಪತ್ರ ಸಲ್ಲಿಸಿದ ರಾಜನಾಥ್ ಸಿಂಗ್, ರಂಗೇರಿದ ಲಕ್ನೋ ಅಖಾಡ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಏ.16- ಉತ್ತರ ಪ್ರದೇಶದ ಪ್ರತಿಷ್ಠಿತ ಲಕ್ನೋ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹಿರಿಯ ಧುರೀಣ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ಉತ್ತರಪ್ರದೇಶ ಬಿಜೆಪಿ ಪರಿಶಿಷ್ಟ ಜಾತಿ (ಎಸ್‍ಸಿ) ಘಟಕದ ಅಧ್ಯಕ್ಷ ಕೌಶಲ್ ಕಿಶೋರ್ ಅವರೂ ಕೂಡ ಮೋಹನ್‍ಲಾಲ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಜಧಾನಿ ಲಕ್ನೋಗೆ ಇಂದು ಬೆಳಗ್ಗೆ 9.30ಕ್ಕೆ ಆಗಮಿಸಿದ ರಾಜನಾಥ್ ಸಿಂಗ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು. ನಂತರ 10.30ಕ್ಕೆ ಪಕ್ಷದ ಕಚೇರಿಯಿಂದ ರೋಡ್ ಶೋ ಆರಂಭವಾಗಯಿತು. ಬಿಜೆಪಿ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಸಿಂಗ್ ಹಜರತ್‍ಗಂಜ್ ಚೌರಾಹಾ ಮಾರ್ಗವಾಗಿ ಕಲೆಕ್ಟರ್ ಅವರ ಕಚೇರಿ ತಲುಪಿ ತನ್ನ ನಾಮಪತ್ರ ಸಲ್ಲಿಸಿದರು.

ಕೇಂದ್ರ ಸಚಿವರಾದ ಹಂಸ್‍ರಾಜ್ ಆಹಿರ್, ರಾಮ್ ವಿಲಾಸ್ ಪಾಸ್ವಾನ್, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಪಕ್ಷದ ಮುಖಂಡ ದಿನೇಶ್ ಶರ್ಮ ಹಾಜರಿದ್ದರು.

ಬಿಜೆಪಿ ರಾಜ್ಯ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ, ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಸಚಿವ ಬೃಜೇಶ್ ಪಾಠಕ್, ಸಂಸದ ಕಲ್ರಾಜ್ ಮಿಶ್ರಾ, ಜಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ, ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೂ ಕೂಡ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.

Facebook Comments