ಇರಾನ್ ರಕ್ಷಣಾ ಸಚಿವರ ಜತೆ ರಾಜನಾಥ್ ಸಮಾಲೋಚನೆ, ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಟೆಹ್ರಾನ್, ಸೆ.6- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್‍ನಲ್ಲಿ ಅಲ್ಲಿನ ರಕ್ಷಣಾ ಮಂತ್ರಿ ಬ್ರಿಗೇಡಿಯರ್ ಜನರಲ್ ಅಮೀರ್ ಅಟಾಮಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಬಾಂಧವ್ಯ ಮತ್ತು ಪ್ರಾದೇಶಿಕ ಭದ್ರತೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.

ರಷ್ಯಾಗೆ ಮೂರು ದಿನಗಳ ಭೇಟಿ ವೇಳೆ ರಾಜಧಾನಿ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಎಸ್‍ಸಿಒ ಸಮಾವೇಶ ಮತ್ತು ಇತರ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ನಿನ್ನೆ ರಾತ್ರಿ ಇರಾನ್‍ಗೆ ತೆರಳಿದ ರಾಜನಾಥ್ ಸಿಂಗ್ ಇಂದು ಬೆಳಗ್ಗೆ ಇರಾನ್‍ನ ತಮ್ಮ ಸಹವರ್ತಿ ಅವರನ್ನು ಭೇಟಿ ಮಾಡಿದರು.

ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮಿರ್ ಅಟಾಮಿ ಅವರೊಂದಿಗೆ ನಡೆದ ಮಾತುಕತೆ ಅತ್ಯಂತ ಫಲಪ್ರದವಾಗಿದೆ. ನಾವು ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲವವರ್ಧನೆ ಮತ್ತು ಆಫ್ಘಾನಿಸ್ತಾನ ಸೇರಿದಂತೆ ಪ್ರಾದೇಶಿಕ ಭದ್ರತಾ ಸಹಕಾರ ಬಲಪಡಿಸುವಿಕೆ ಕುರಿತು ಮಹತ್ವದ ಚರ್ಚೆ ನಡೆಸಿದೆವು ಎಂದು ಅವರು ತಿಳಿಸಿದ್ದಾರೆ.

ರಷ್ಯಾ ಪ್ರವಾಸದ ವೇಳೆ ರಾಜನಾಥ ಸಿಂಗ್ ಅವರು ಮಾಸ್ಕೋದಲ್ಲಿ ರಷ್ಯಾ , ಚೀನಾ ಮತ್ತು ಇತರ ದೇಶಗಳ ರಕ್ಷಣಾ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದರು.

Facebook Comments