ರಾಜನಾಥ್ ಸಿಂಗ್‍ರನ್ನು ಮೂಲೆಗುಂಪು ಮಾಡಿದರಾ ಮೋದಿ..?!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.6 (ಪಿಟಿಐ)- ಕೇಂದ್ರ ಮಂತ್ರಿಮಂಡಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಎರಡನೇ ಸ್ಥಾನದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ. ದಕ್ಕೆ ಪುಷ್ಟಿ ನೀಡುವಂತೆ ನಿನ್ನೆಯಷ್ಟೇ ರಚನೆಯಾದ ಎಂಟು ಸಂಪುಟ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಶಾಗೆ ಎಲ್ಲ ಘಟಕಗಳಲ್ಲೂ ಸ್ಥಾನ ನೀಡಲಾಗಿದೆ. ಆದರೆ ರಕ್ಷಣಾ ಸಚಿವರಿಗೆ ಲಭಿಸಿರುವುದು ಕೇವಲ ಎರಡು ಸ್ಥಾನಗಳು

ಆರ್ಥಿಕ ವ್ಯವಹಾರಗಳು ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳಲ್ಲಿ ಮಾತ್ರ ಸ್ಥಾನ ಪಡೆದಿರುವ ಸಿಂಗ್‍ಗೆ ಮಹತ್ವದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಸ್ಥಾನ ನೀಡಿಲ್ಲ. ಈ ಹಿಂದೆ ಗೃಹ ಸಚಿವರಾಗಿ ಸಮರ್ಥ ಕಾರ್ಯ ನಿರ್ವಹಿಸಿ ಈಗ ರಕ್ಷಣಾ ಮಂತ್ರಿಯಾಗಿರುವ ರಾಜನಾಥ್ ಸಿಂಗ್ ಸಾಕಷ್ಟು ಅನುಭವ ಇರುವ ಮುಖಂಡರು.

ಆದರೆ ಇದೇ ಮೊದಲು ಕೇಂದ್ರ ಸಚಿವರಾಗಿರುವ ಅಮಿತ್ ಶಾಗೆ ಎಲ್ಲ ಎಂಟು ಸಮಿತಿಗಳಲ್ಲೂ ಅವಕಾಶ ನೀಡಿರುವುದು ಇತರ ಸಚಿವರ ಹುಬ್ಬೇರುವಂತೆ ಮಾಡಿದೆ.  ಮತ್ತೊಂದು ಅಚ್ಚರಿ ಸಂಗತಿ ಎಂದರೆ ಹಿರಿಯ ಸಚಿವರಾಗಿರುವ ರಾಜನಾಥ್ ಸಿಂಗ್ ಉಳಿದ ಮಂತ್ರಿ ಮಹೋದಯರಿಗಿಂತ ಅತ್ಯಂತ ಕಡಿಮೆ ಸ್ಥಾನ ಪಡೆದಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಆರು ಸಮಿತಿಗಳಲ್ಲಿ ಸ್ಥಾನ ಲಭಿಸಿದ್ದು, ಅವರಿಗಿಂತ 2 ಹೆಚ್ಚುವರಿ ಸ್ಥಾನಗಳನ್ನು ಪಡೆದಿರುವ ಅಮಿತ್ ಎಲ್ಲ ಎಂಟು ಘಟಕಗಳಲ್ಲೂ ಅವಕಾಶ ಗಿಟ್ಟಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಅವರಿಗೆ ಅನುಕ್ರಮವಾಗಿ ಏಳು ಮತ್ತು ಐದು ಸಮಿತಿಗಳಲ್ಲಿ ಸ್ಥಾನ ಲಭಿಸಿದೆ.

ರಾಜಕೀಯ ವ್ಯವಹಾರಗಳಲ್ಲೂ ಸಾಕಷ್ಟು ಪಳಗಿರುವ ರಾಜನಾಥ್ ಸಿಂಗ್ ಎನ್‍ಡಿಎ-1 ಸರ್ಕಾರದಲ್ಲಿ ಪ್ರಧಾನಿ ಮೋದಿ ಅವರಿಗೆ ಕೆಲವು ಮಹತ್ವದ ವಿಷಯಗಳಲ್ಲಿ ಸಲಹೆಗಳನ್ನು ನೀಡಿದ್ದರು. ಆದರೆ ಅತ್ಯಂತ ಮಹತ್ವದ ರಾಜಕೀಯ ವ್ಯವಹಾರ ಕುರಿತ ಸಂಪುಟ ಸಮಿತಿಯಲ್ಲಿ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿದ್ದರು ಎಂಬುದು ಇಲ್ಲಿ ಗಮನಾರ್ಹ. ಹಾಗಾದರೆ ಹೊಸ ರಾಜಕೀಯ ಸಮಿತಿಯಲ್ಲಿ ಹಿರಿಯ ಮುಖಂಡ ರಾಜನಾಥ್ ಸಿಂಗ್‍ಗೆ ಸ್ಥಾನ ತಪ್ಪಲು ಕಾರಣವೇನು ? ಎಂಬುದು ಈಗ ಮೋದಿ ಮಂತ್ರಿ ಮಂಡಲದಲ್ಲಿ ಗುಸುಗುಸು ಪ್ರಶ್ನೆಯಾಗಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷರಾಗಿದ್ಧಾರೆ. ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಲ್ಲದೇ, ಸಾರಿಗೆ ಸಚಿವ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೊಯೆಲ್, ಡಿ.ವಿ. ಸದಾನಂದಗೌಡ, ನರೇಂದ್ರ ತೋಮರ್, ರವಿ ಶಂಕರ್ ಪ್ರಸಾದ್, ಹರ್‍ಸಿಮ್ರತ್ ಕೌರ್ ಬಾದರ್, ಎಸ್.ಜೈಶಂಕರ್ ಮತ್ತು ಧರ್ಮೇಂದ್ರ ಪ್ರಧಾನ್ ಇದ್ದಾರೆ.

ಸಂಸದೀಯ ವ್ಯವಹಾರಗಳ ಸಮಿತಿ, ಸಂಪುಟ ನೇಮಕಗಳ ಸಮಿತಿ, ಬಂಡವಾಳ ಮತ್ತು ಪ್ರಗತಿ ಕುರಿತ ಸಂಪುಟ ಸಮಿತಿ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಸಮಿತಿಗಳಲ್ಲೂ ರಾಜನಾಥ್ ಸಿಂಗ್‍ಗೆ ಸ್ಥಾನ ನೀಡಿಲ್ಲ.

Facebook Comments