ಪ್ರವಾಹ : ಕರ್ನಾಟಕಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ರಾಜನಾಥ್ ಸಿಂಗ್ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.8-ಪ್ರವಾಹ ಪೀಡಿತ ಕರ್ನಾಟಕಕ್ಕೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಯ ನೀಡಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ರಾಜನಾಥ್ ಸಿಂಗ್ ಅವರು ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಪ್ರವಾಹದ ಬಗ್ಗೆ ಮಾಹಿತಿ ಪಡೆದರು.

ಪ್ರವಾಹ ಪೀಡಿತ ರಾಜ್ಯಕ್ಕೆ ಸೇನೆ, ಎನ್‍ಡಿಆರ್‍ಎಫ್, ವಾಯುಪಡೆ ಹೆಲಿಕಾಪ್ಟರ್, ಅಗತ್ಯ ಸಾಮಾಗ್ರಿಗಳು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ. ಸಂಕಷ್ಟದಲ್ಲಿರುವ ರಾಜ್ಯದ ಜನತೆಯೊಂದಿಗೆ ಕೇಂದ್ರವು ಕೈ ಜೋಡಿಸಲು ಸಿದ್ದವಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಇಂದು ಸಂಜೆಯೊಳಗೆ ರಾಜ್ಯಕ್ಕೆ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಮತ್ತು ಸೇನಾ ತಂಡ ಆಗಮಿಸಲಿದೆ. ಹವಾಮಾನ ವೈಪರಿತ್ಯದಿಂದಾಗಿ ತುಸು ವಿಳಂಬವಾಗಿದೆ. ನಿಮಗೆ ಎಷ್ಟು ಹೆಲಿಕಾಪ್ಟರ್ ಅಗತ್ಯವಿದೆಯೋ ಅಷ್ಟನ್ನೂ ಬಳಸಿಕೊಳ್ಳಿ. ಅಲ್ಲದೆ ಹೆಚ್ಚುವರಿಯಾಗಿ ರಕ್ಷಣಾ ತಂಡ ಸಂಜೆಯೊಳಗೆ ರಾಜ್ಯಕ್ಕೆ ಆಗಮಿಸಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನತೆ ಸಂಕಷ್ಟದಲ್ಲಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಪ್ರತಿ ದಿನದ ಮಾಹಿತಿಗಳು ನಮಗೆ ಲಭ್ಯವಾಗಿವೆ. ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ನೀಡಲಾಗುವುದು.

ನಿರಾಶ್ರಿತರ ಶಿಬಿರಗಳನ್ನು ತೆರೆಯಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಿ. ಪ್ರವಾಹಕ್ಕೆ ಸಿಲುಕಿರುವ ಜನರನ್ನು ದೋಣಿ ಬಳಕೆ ಹಾಗೂ ಅಗತ್ಯವಿರುವ ಕಡೆ ಹೆಲಿಕಾಪ್ಟರ್‍ಗಳನ್ನು ಬಳಸಿಕೊಂಡು ಜನರ ರಕ್ಷಣೆಗೆ ಮುಂದಾಗುವಂತೆ ಬಿಎಸ್‍ವೈಗೆ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ಎಲ್ಲ ರೀತಿಯ ಅಗತ್ಯ ನೆರವುಗಳನ್ನು ನೀಡಲು ಸಿದ್ಧವಿದೆ. ಜನರಿಗೆ ಮುಖ್ಯವಾಗಿ ಆಹಾರ ಪೆÇಟ್ಟಣ, ಕುಡಿಯುವ ನೀರು, ಹೊದಿಕೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧವಿದೆ.

ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರು, ಶಾಸಕರು ಸೇರಿದಂತೆ ಪ್ರತಿಯೊಬ್ಬರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಯಾರೊಬ್ಬರು ತಮ್ಮ ತಮ್ಮ ಕ್ಷೇತ್ರ ಬಿಟ್ಟು ಕದಲದಂತೆ ಎಲ್ಲ ಜನಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡುವಂತೆ ಯಡಿಯೂರಪ್ಪನವರಿಗೆ ರಾಜನಾಥ್ ಸಿಂಗ್ ಸಲಹೆ ಮಾಡಿದ್ದಾರೆ.

Facebook Comments

Sri Raghav

Admin