ಹೆಚ್‌ಡಿಡಿ ಮತ್ತು ಖರ್ಗೆ ರಾಜ್ಯಸಭೆ ಪ್ರವೇಶ, ಮೂರು ಪಕ್ಷದ ಅಭ್ಯರ್ಥಿಗಳು ಅವಿರೋಧ ಆಯ್ಕೆ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.8-ರಾಜ್ಯ ವಿಧಾನಸಭೆಯಿಂದ ಇದೇ 19ರಂದು ನಡೆಯಲಿರುವ ನಾಲ್ಕು ಸ್ಥಾನಗಳ ರಾಜ್ಯಸಭೆಯ ಚುನಾವಣೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ನ ಬಿ. ಕೆ. ಹರಿಪ್ರಸಾದ್, ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಅವರಿಂದ ತೆರವಾಗುವ ಸ್ಥಾನಕ್ಕೆ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

ಜೆಡಿಎಸ್ ಕೂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ನಾಳೆ ಅವರು, ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಮದಿದೆ.

ಉಳಿದಂತೆ ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸು ಮಾಡಿದೆ. ಆದರೆ, ಈವರೆಗೂ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಯಾವುದೇ ಕ್ಷಣದಲ್ಲಾದರೂ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ವಿಧಾನಸಭೆಯಲ್ಲಿ 117 ಶಾಸಕರ ಬಲ ಹೊಂದಿರುವ ಬಿಜೆಪಿ 2 ಸ್ಥಾನದಲ್ಲಿ ಸುಲಭವಾಗಿ ಜಯಗಳಿಸಲಿದೆ. ಪಕ್ಷ ಈಗಾಗಲೇ ಪ್ರಭಾಕರ ಕೋರೆ, ರಮೇಶ್ ಕತ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ಎಂ. ನಾಗರಾಜ್ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಟ್ಟಿದೆ.

ಇವರಲ್ಲಿ ಇಬ್ಬರ ಹೆಸರನ್ನು ಅಂತಿಮಗೊಳಿಸುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ಇದೆ.

ಕಾಂಗ್ರೆಸ್ ವಿಧಾನಸಭೆಯಲ್ಲಿ 68 ಶಾಸಕರ ಬಲ ಹೊಂದಿದೆ. ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಭ್ಯರ್ಥಿ. 48 ಮತಗಳಿಂದ ಅವರು ಸುಲಭವಾಗಿ ಜಯಗಳಿಸಲಿದ್ದಾರೆ. ಉಳಿದ ಮತಗಳು ಏನಾಗಲಿವೆ? ಎಂಬುದು ಕುತೂಹಲ. ಎಚ್. ಡಿ. ದೇವೇಗೌಡರು ಕಣಕ್ಕಿಳಿದು ಬೆಂಬಲ ಕೇಳಿದರೆ ಉಳಿದ ಮತಗಳನ್ನು ಪಕ್ಷಕ್ಕೆ ನೀಡಲು ಕಾಂಗ್ರೆಸ್ ಆಲೋಚನೆ ನಡೆಸಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ 34. ಪಕ್ಷ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸಿದರೆ ಬೇರೆ ಪಕ್ಷದ ಬೆಂಬಲ ಅಗತ್ಯವಾಗಿ ಬೇಕು. ಹರಿದಾಡುತ್ತಿರುವ ಸುದ್ದಿಯಂತೆ ಎಚ್. ಡಿ. ದೇವೇಗೌಡರು ಕಣಕ್ಕಿಳಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ.

# ತಲೆಕೆಳಗಾದ ಲೆಕ್ಕಚಾರ:
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಬೆಂಬಲದ ಆಶ್ವಾಸನೆ ಮೇಲೆ ಸ್ಪರ್ಧಿಸಲು ಒಪ್ಪುವ ಮೂಲಕ ಬಿಜೆಪಿಯ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ. ದೇವೇಗೌಡರು ಸ್ಪರ್ಧೆ ಮಾಡದೇ ಹೋದರೆ ತನ್ನ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಮಾಜಿ ಪ್ರಧಾನಿ ಸ್ಪರ್ಧೆ ಹೊಸ ತಲೆನೋವು ತಂದೊಡ್ಡಿದೆ.

ಕಾಂಗ್ರೆಸ್ ಅಧ್ಯಕ್ಷೆ (ತಾತ್ಕಾಲಿಕ) ಸೋನಿಯಾ ಗಾಂಧಿ ಖುದ್ದು ಕರೆ ಮಾಡಿ ಬೆಂಬಲ ಸೂಚಿಸಿದ ನಂತರ ದೇವೇಗೌಡರು ಸ್ಪರ್ಧೆಗೆ ಒಪ್ಪಿದ್ದಾರೆ ಎನ್ನಲಾಗಿದೆ.ಎಲ್ಲ ಅಂದುಕೊಂಡಂತೆ ನಡೆದರೇ ದೊಡ್ಡ ಗೌಡರು ಮಂಗಳವಾರ ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ತನ್ನ ಮೂರನೇ ಅಭ್ಯರ್ಥಿ ಹಾಕದಿರಲು ಬಿಜೆಪಿ ಸಹ ತೀರ್ಮಾನಿಸಿದ್ದು, ಈಗ ತನ್ನ ಇಬ್ಬರು ಅಭ್ಯರ್ಥಿಗಳು ಯಾರೆಂಬುದರ ಬಗ್ಗೆ ಕಸರತ್ತು ನಡೆಸಬೇಕಿದೆ. ಒಂದು ವೇಳೆ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ಮೂರನೇ ಅಭ್ಯರ್ಥಿ ಹಾಕುವುದಕ್ಕೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇನ್ನೂ ಮನಸ್ಸು ಮಾಡಿಲ್ಲ.

ಈಗಿರುವ ಕೊರೋನಾ ಸಂಕಷ್ಟದಲ್ಲಿ ರಾಜ್ಯಸಭೆ ಚುನಾವಣೆ ಸುಸೂತ್ರವಾಗಿ ನಡೆದು ಆಯಾ ಪಕ್ಷಗಳ/ಮೈತ್ರಿಯ ಬಲದ ಮೇಲೆ ಮುಗಿಯಲಿ ಎಂಬುದು ಯಡಿಯೂರಪ್ಪನವರ ನಿಲುವಾಗಿದೆ. ಇದೇ ವೇಳೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂಬ ಖಾತರಿ ಸಿಕ್ಕ ನಂತರವೇ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಮೂರು ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಲು ಹೆಸರು ಶಿಫಾರಸು ಮಾಡಿತ್ತು.ಹಾಲಿ ಸಂಸದ ಪ್ರಭಾಕರ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳನ್ನು ಕೋರ್ ಕಮಿಟಿ ಹೈಕಮಾಂಡಿಗೆ ರವಾನಿಸಿತ್ತು.

ಮೂರನೇ ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ಘಟಕ ಉತ್ಸುಕತೆ ತೋರಿದ್ದರೂ ದೇವೇಗೌಡರ ದೆಹಲಿ ಸಂಪರ್ಕಗಳು ಅದಕ್ಕೆ ಅಡ್ಡಗಾಲು ಹಾಕಿದವು ಎಂದೂ ಬಲ್ಲ ಮೂಲಗಳು ಹೇಳಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿಯ ಇಬ್ಬರು, ಕಾಂಗ್ರಸ್‍ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ದೇವೇಗೌಡರು ಮೇಲ್ಮನೆ ಸೇರುವುದು ನಿಶ್ಚಿತವಾಗಿದೆ.

ಇದೇ ವೇಳೆ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಇಂದು ಬಹುತೇಕ ಅಂತಿಮಗೊಳಿಸಲಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಎರಡು ಸ್ಥಾನಗಳಿಗೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಈಗಾಗಲೇ ರಾಜ್ಯಸಭಾ ಸಂಸದರಾಗಿ ಅವಧಿಯನ್ನು ಮುಗಿಸಿರುವಂತಹ ಪ್ರಭಾಕರ ಕೋರೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಕೋರೆ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ನಿರಾಕರಿಸುವ ಸಾಧ್ಯತೆ ದಟ್ಟವಾಗಿದೆ.

ಬೆಳಗಾವಿಯ ಮತ್ತೋರ್ವ ಪ್ರಭಾವಿ ರಾಜಕಾರಣಿಯಾಗಿರುವ ರಮೇಶ್ ಕತ್ತಿ ಟಿಕೆಟ್‍ಗಾಗಿ ದುಂಬಾಲು ಬಿದ್ದಿದ್ದು, ಅವರ ಪರವಾಗಿ ರಮೇಶ್ ಜಾರಕಿಹೊಳಿ ಲಾಬಿ ಮಾಡುತ್ತಿರುವುದು ಹೈಕಮಾಂಡ್‍ಗೆ ತಲೆನೋವಾಗಿದೆ. ಒಂದು ವೇಳೆ ರಮೇಶ್ ಕತ್ತಿಗೆ ಟಿಕೆಟ್ ನೀಡದಿದ್ದಲ್ಲಿ ಅವರ ಸಹೋದರ ಉಮೇಶ್ ಕತ್ತಿ ಬಂಡಾಯವೇಳುವ ಸೂಚನೆಯನ್ನುನೀಡಿದ್ದಾರೆ.

ಇನ್ನು ಮುಖ್ಯಮಂತ್ರಿಗಳಿಗೆ ರಮೇಶ್ ಕತ್ತಿ ಹಾಗೂ ಪ್ರಭಾಕರ ಕೋರೆ ಇಬ್ಬರೂ ಆತ್ಮೀಯರಾಗಿರುವುದರಿಂದ ಯಡಿಯೂರಪ್ಪ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.

ಒಂದು ವೇಳೆ ಈ ಅಭ್ಯರ್ಥಿಗಳನ್ನೇನಾದರೂ ಕಣಕ್ಕಿಳಿಸಿದರೆ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಹೆಚ್ಚುವರಿ ಮತಗಳನ್ನು ಬಿಜೆಪಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಇವರ ಜೊತೆಗೆ ಆರ್ಥಿಕ ತಜ್ಞ ಕೆ.ವಿ.ಕಾಮತ್ ಅವರ ಹೆಸರು ಕೂಡ ರೇಸ್‍ನಲ್ಲಿದೆ.

ಇವೆಲ್ಲದರ ನಡುವೆ ಕಳೆದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದ ಪತನಕ್ಕೆ ಕಾರಣರಾಗಿ ಪತನಕ್ಕೆ ಕಾರಣರಾಗಿ ಆನಂತರ ನಡೆದ ಉಪಚುನಾವಣೆಯಲ್ಲಿ ಸೋಲನ್ನನುಭವಿಸಿದ್ದು ಬಿಜೆಪಿಯ ಕೆಲವು ನಾಯಕರು ಇದೀಗ ರಾಜ್ಯಸಭಾ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

Facebook Comments