ರಾಜ್ಯಸಭೆಗೆ ಗೌಡರು-ಖರ್ಗೆ ಆಯ್ಕೆ ಸಮಂಜಸ ಹಾಗೂ ಸಕಾಲಿಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.10- ರಾಜ್ಯಸಭೆಗೆ ರಾಜ್ಯದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಮಂಜಸ ಹಾಗೂ ಸಕಾಲಿಕವಾದುದು.  ನಾಡಿನ ಹಿತದೃಷ್ಟಿಯಿಂದ ಈ ಇಬ್ಬರು ರಾಜಕೀಯ ನಾಯಕರನ್ನು ಆಯ್ಕೆ ಮಾಡಿರುವುದು ತುಂಬ ಒಳ್ಳೆಯದು ಎಂಬ ವಿಚಾರ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿವೆ.

ಸುದೀರ್ಘ ರಾಜಕೀಯ, ಆಡಳಿತ ಹಾಗೂ ಹೋರಾಟದ ಅನುಭವವುಳ್ಳ ಈ ಇಬ್ಬರು ನಾಯಕರು ಸಂಸತ್‍ನಲ್ಲಿ ರಾಜ್ಯದ ಪರವಾಗಿ ದನಿ ಎತ್ತಲಿದ್ದಾರೆ ಎಂಬ ವಿಶ್ವಾಸ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿವೆ.  ನಾಡಿನ ನೆಲ, ಜಲ ವಿಚಾರದಲ್ಲಿ ದೇವೇಗೌಡರು ಪಕ್ಷವನ್ನು ಬದಿಗಿಟ್ಟು ಹೋರಾಟ ಮಾಡಿದ್ದಾರೆ. ಕೃಷ್ಣ, ಕಾವೇರಿ ವಿಚಾರದಲ್ಲೂ ಸಾಕಷ್ಟು ಅಧ್ಯಯನ ನಡೆಸಿರುವ ರಾಜಕಾರಣಿ ಎಂದೇ ಬಿಂಬಿಸಲಾಗುತ್ತಿದೆ.

ಗೌಡರು ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ, ಸಂಸದರಾಗಿ ಸಾಕಷ್ಟು ಆಡಳಿತ ಅನುಭವ ಹೊಂದಿದ್ದಾರೆ. ಅಲ್ಲದೆ ಬಡವರ, ರೈತರ ಹಾಗೂ ಜನಪರವಾದ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಸಂಸತ್‍ನಲ್ಲಿ ರಾಜ್ಯದ ಪರವಾಗಿ ದನಿ ಎತ್ತುತ್ತಲೇ ಬಂದಿದ್ದಾರೆ. ಇಂತಹ ನಾಯಕರು ರಾಜ್ಯಸಭೆಗೆ ಆಯ್ಕೆಯಾಗಿರುವುದು ನಾಡಿನ ಹಿತದೃಷ್ಟಿಯಿಂದ ಸಮಂಜಸವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಕೇಂದ್ರದ ಸಚಿವರಾಗಿ, ಸಂಸದರಾಗಿ ಸುದೀರ್ಘ ಆಡಳಿತ ಅನುಭವ ಹಾಗೂ ಹೋರಾಟದ ಹಿನ್ನೆಲೆಯನ್ನು ಹೊಂದಿದ್ದಾರೆ.  ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಪರಿಚ್ಚೇಧ 371 ಜೆ ದೊರೆಯಲು ನಡೆಸಿದ ಹೋರಾಟದಲ್ಲಿ ಖರ್ಗೆ ಅವರ ಪಾತ್ರವೂ ಪ್ರಮುಖವಾಗಿತ್ತು.

ನಾಡು, ನುಡಿ, ಜಲದ ಪರವಾಗಿಯೂ ಸಮರ್ಥವಾಗಿ ದನಿ ಎತ್ತುವ ನಾಯಕರು ಕೂಡ ಆಗಿದ್ದಾರೆ. ಸಂಸತ್‍ನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗಲೂ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂಬ ಅಭಿಪ್ರಾಯವಿದೆ.  ಒಟ್ಟಾರೆ ಈ ಇಬ್ಬರೂ ನಾಯಕರು ರಾಜ್ಯಸಭೆ ಪ್ರವೇಶ ಮಾಡಿರುವುದು ನಾಡಿನ ಹಿತದೃಷ್ಟಿಯಿಂದ ಯೋಗ್ಯವಾಗಿದೆ. ಕಾಂಗ್ರೆಸ್ ಪಕ್ಷವು ಖರ್ಗೆ ಅವರನ್ನು ಆಯ್ಕೆ ಮಾಡಿ ಒಳ್ಳೆಯ ಕೆಲಸ ಮಾಡಿದೆ.

ಅದೇ ರೀತಿ ಜೆಡಿಎಸ್ ಶಾಸಕರೆಲ್ಲರೂ ಒತ್ತಡ ತಂದು ಗೌಡರನ್ನು ರಾಜ್ಯಸಭೆ ಪ್ರವೇಶ ಮಾಡುವಂತೆ ಮಾಡಿರುವುದು ಕೂಡ ಮೆಚ್ಚುವಂತದ್ದಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿ ಕೂಡ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶ ಮಾಡುವ ಅವಕಾಶ ಕಲ್ಪಿಸಿರುವುದು ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ದೇವೇಗೌಡರ ಆಯ್ಕೆ ಸುಗಮವಾಗುವಂತೆ ಹೆಚ್ಚುವರಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಹಾಕದಿರುವ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗೌಡರು ಮತ್ತು ಖರ್ಗೆ ಅವರು ಪರಾಜಿತವಾದಾಗ ರಾಜ್ಯಕ್ಕಾದ ನಷ್ಟವೆಂದೇ ವ್ಯಾಖ್ಯಾನಿಸಲಾಗಿತ್ತು. ಇವರಿಬ್ಬರು ಅನುಭವವುಳ್ಳ ರಾಜಕಾರಣಿಗಳು. ಇವರ ಅನುಭವ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಈ ಸಂಕಷ್ಟದ ರಪಿಸ್ಥಿತಿಯಲ್ಲಿ ಅವಶ್ಯವಿತ್ತು ಎಂದು ಚರ್ಚಿಸಲಾಗುತ್ತಿದೆ.

Facebook Comments