ರಾಜ್ಯಸಭೆ ಉಪ ಸಭಾಪತಿ ಚುನಾವಣೆ : ಹರಿವಂಶ್, ಮನೋಜ್ ಕಣದಲ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.14-ಡೆಡ್ಲಿ ಕೊರೊನಾ ಹಾವಳಿ ನಡುವೆ ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಸಂಜೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.  ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‍ಡಿಎ) ಅಭ್ಯರ್ಥಿಯಾಗಿ ಹರಿವಂಶ ನಾರಾಯಣ ಸಿಂಗ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್‍ಜೆಡಿ)ದ ಮನೋಜ್ ಝಾ ಸ್ಪರ್ಧೆಯಲ್ಲಿದ್ದಾರೆ. ಹರಿವಂಶ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಹರಿವಂಶ್ ನಾರಾಯಣ ಸಿಂಗ್ ಪರವಾಗಿ ಮೊದಲ ನಿರ್ಣಯ ಮಂಡಿಸಿದರೆ, ಮೇಲ್ಮನೆ ಪ್ರತಿಪಕ್ಷದ ನಾಯಕ ಕಾಂಗ್ರೆಸ್‍ನ ಗುಲಾಂ ನಬಿ ಆಜಾದ್ ಅವರು, ಮನೋಜ್ ಝಾ ಬೆಂಬಲವಾಗಿ ಪ್ರಥಮ ನಿರ್ಣಯ ಸಲ್ಲಿಸುವರು. ಅಗತ್ಯವಿದ್ದರೆ ಮತದಾನ ನಡೆಯಲಿದೆ.

ಎನ್‍ಡಿಎ ಅಭ್ಯರ್ಥಿಯಾಗಿ ರಾಜ್ಯಸಭೆ ಸದಸ್ಯ ಹರಿವಂಶ್ ಸೆ.9ರಂದು ಉಪ ಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆರ್‍ಜೆಡಿ ಹಿರಿಯ ಸಂಸದ ಮನೋಜ್ ಝಾ ಸೆ.10ರಂದು ತಮ್ಮ ಪ್ರತಿಪಕ್ಷಗಳ ಒಮ್ಮತದ ಸ್ಪರ್ಧಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಸೆ.11 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು.

ಈ ಮಧ್ಯೆ, ಬಿಜು ಜನತಾದಳ (ಬಿಜೆಡಿ) ಎನ್‍ಡಿಎ ಅಭ್ಯರ್ಥಿ ಹರಿವಂಶ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ. ತಮ್ಮ ಪಕ್ಷವು ಎನ್‍ಎಡಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ಟಾಯಕ್ ಘೋಷಿಸಿದ್ದಾರೆ.

Facebook Comments