ರಾಜ್ಯಸಭಾ ಕಲಾಪ ಬಹಿಷ್ಕರಿಸಿದ ಪ್ರತಿಪಕ್ಷಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22- ಎಂಟು ಸಂಸದರ ಸಸ್ಪೆಂಡ್ ಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಲಾಪ ಬಹಿಷ್ಕರಿಸಿದ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ. ಸಂಸತ್ತಿನ ಮುಂಗಾರು ಅಧಿವೇಶನದ 9ನೆ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಎಎಪಿ ಮತ್ತು ಟಿಎಂಸಿ ಸದಸ್ಯರು ಎಂಟು ಸದಸ್ಯರ ಅಮಾನತು ಕ್ರಮವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದವು.

ನಂತರ ಪ್ರತಿಪಕ್ಷಗಳಾದ ಎನ್‍ಸಿಪಿ, ಸಮಾಜವಾದಿ ಪಕ್ಷ, ಶಿವಸೇನೆ ಮತ್ತು ಎಡಪಕ್ಷಗಳ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು. ವಿರೋಧ ಪಕ್ಷಗಳ ಕಲಾಪ ಬಹಿಷ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಡಾ.ಎಂ.ವೆಂಕಯ್ಯನಾಯ್ಡು ಈ ಕ್ರಮ ಸಲ್ಲದು. ಬಹಿಷ್ಕಾರವನ್ನು ಬಿಟ್ಟು ಸದನದ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಕಲಾಪದಲ್ಲಿ ಗದ್ದಲ, ಕೋಲಾಹಲ ಉಂಟು ಮಾಡಿ ಅನುಚಿತವಾಗಿ ವರ್ತಿಸಿದ ಆರೋಪಕ್ಕಾಗಿ ಎಂಟು ಸದಸ್ಯರನ್ನು ಸಸ್ಪೆಂಡ್ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡರು.

ಈ ಸದಸ್ಯರು ಅಶಿಸ್ತು ವರ್ತನೆಗಾಗಿ ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದರೆ ಅವರ ಸಸ್ಪೆಂಡ್ ಕ್ರಮವನ್ನು ಹಿಂಪಡೆಯುವ ಬಗ್ಗೆ ಚಿಂತಿಸಬಹುದು ಎಂದು ಹೇಳಿದರು. ನಂತರ ಮಾತನಾಡಿದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಸರ್ಕಾರ ಮತ್ತು ವಿರೋಧ ಪಕ್ಷಗಳು ಕುಳಿತು ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ಮಾಡಿದರು.

ಇದಕ್ಕೂ ಮುನ್ನ ಮೇಲ್ಮನೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಎಂಟು ಸದಸ್ಯರ ಅಮಾನತು ರದ್ದಾಗುವವರೆಗೂ ಕಲಾಪ ಬಹಿಷ್ಕಾರವನ್ನು ಮುಂದುವರಿಸುವುದಾಗಿ ತಿಳಿಸಿದ್ದರು.

Facebook Comments