ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಚಿಂತನೆ : ರಜನಿ, ಖುಷ್ಬುಗೆ ರಾಜ್ಯಸಭಾ ಸ್ಥಾನ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6-ದಕ್ಷಿಣ ಭಾರತದಲ್ಲಿ ಪಕ್ಷವನ್ನು ಇನ್ನಷ್ಟು ಭದ್ರತಪಡಿಸಿ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸಿರುವ ಬಿಜೆಪಿ ರಾಜಸಭಾ ಸ್ಥಾನಕ್ಕೆ ತಮಿಳುನಾಡಿನ ಸಿನಿಮಾ ನಟರಿಬ್ಬರನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ.  ನಿನ್ನೆ ಮಂಗಳೂರಿನಲ್ಲಿ ಮುಕ್ತಾಯ ವಾದ ಕಾರ್ಯಕಾರಿಣಿ ಸಭೆಯಲ್ಲಿ ಅಶೋಕ್ ಗಸ್ತಿ ಅವರ ಪತ್ನಿ ಸೇರಿದಂತೆ ನಾಲ್ವರ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿದೆ. ಇದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದ್ದು, ಈ ಬಾರಿ ರಾಜ್ಯಸಭಾ ಸ್ಥಾನಕ್ಕೆ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ನಟಿ ಖುಷ್ಬು ಹೆಸರು ಕೇಳಿಬಂದಿದೆ.

ರಜನಿಕಾಂತ್ ಮೂಲತಃ ಕನ್ನಡಿಗರಾಗಿದ್ದು, ಕರ್ನಾಟಕದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಖುಷ್ಬು ಕೂಡ ಈ ಹಿಂದೆ ಕನ್ನಡದಲ್ಲಿ ಸಿನಿಮಾಗಳಲ್ಲಿ ನಟಿಸಿರುವುದರಿಂದ ಚಿರಪರಿಚಿತರು. ಇಬ್ಬರಲ್ಲಿ ಒಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಪಾಂಡಿಚೇರಿ, ತಮಿಳುನಾಡುಗಳಲ್ಲಿ ಬಿಜೆಪಿ ಈಗಲೂ ಪ್ರಬಲವಾಗಿಲ್ಲ. ಇದ್ದುದರಲ್ಲೇ ಕರ್ನಾಟಕ ಮತ್ತು ಗೋವಾದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ರಜನಿಕಾಂತ್ ಇಲ್ಲವೇ ಖುಷ್ಬು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದರೆ ಪಕ್ಷದ ಸಂಘಟನೆಗೆ ಅನುಕೂಲ ವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಪಕ್ಷದ ನಿಷ್ಠಾವಂತ ತಳಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬುದರ ಜೊತೆಗೆ ತಮಿಳುನಾಡು ರಾಜಕೀಯದಲ್ಲಿ ನೆಲೆಯೂರಲು ಅಲ್ಲಿನ ಸಿನಿ ತಾರೆಯರೊಬ್ಬರನ್ನು ಆಯ್ಕೆ ಮಾಡಲುದ್ದೇಶಿಸಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪ ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತು ವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ತಳ ಸಮುದಾಯದ ಸಾಮಾನ್ಯ ಕಾರ್ಯಕರ್ತ ಅಶೋಕ್ ಗಸ್ತಿ ಅವರ ಸೇವೆಯನ್ನು ಗುರುತಿಸಿ ಅವರಿಗೆ ಅಚ್ಚರಿ ರೀತಿಯಲ್ಲಿ ರಾಜ್ಯಸಭೆಗೆ ಅವಕಾಶ ನೀಡಲಾಯಿತು. ಈಗಲೂ ಕೂಡ ಅದೇ ರೀತಿ ಸಾಮಾನ್ಯ ಕಾರ್ಯಕರ್ತರ ಸೇವೆ ಪರಿಗಣಿಸಬೇಕು ಎನ್ನುವ ಚರ್ಚೆ ರಾಜ್ಯ ಬಿಜೆಪಿ ನಾಯಕರಲ್ಲಿ ನಡೆಯುತ್ತಿದೆ. ಈ ಹಿಂದೆ ಹೊರರಾಜ್ಯದವರಿಗೆ ಅವಕಾಶ ಕೊಡುವ ಬಗ್ಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮರು ಆಯ್ಕೆ ಬಯಸಿದ ವೇಳೆ ಕನ್ನಡದ ಪರ ನಿಂತಿಲ್ಲ ಎನ್ನುವ ಕಾರಣ ನೀಡಿ ವೆಂಕಯ್ಯ ಸಾಕಯ್ಯ ಅಭಿಯಾನ ನಡೆಸಲಾಗಿತ್ತು. ನಂತರ ಆಂಧ್ರಪ್ರದೇಶದವರೇ ಆದ ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ನೀಡಲಾಗಿತ್ತು. ವೆಂಕಯ್ಯ ಬಳಿಕ ನಿರ್ಮಲಾ ಸೀತಾರಾಮನ್ ಬಗ್ಗೆಯೂ ಕನ್ನಡಿಗರಿಗೆ ಅಷ್ಟು ಒಲವು ಉಳಿದಿಲ್ಲ.

ರಾಜ್ಯದಿಂದ ಆಯ್ಕೆಯಾಗಿ ರಾಜ್ಯದ ಪರ ನಿಲ್ಲುತ್ತಿಲ್ಲ ಎನ್ನುವ ಅಸಮಧಾನ ಆಗಾಗ ಕೇಳಿ ಬರುತ್ತಲೇ ಇದೆ. ಇದರ ನಡುವೆ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಹೊರ ರಾಜ್ಯದ ಮುಖಂಡರನ್ನು ಆಯ್ಕೆ ಮಾಡಲು ಬಿಜೆಪಿ ಮುಂದಾದರೆ ಜನರಿಂದ ಮತ್ತೆ ತೀವ್ರ ವಿರೋಧ ಎದುರಿಸಬೇಕಾಗಲಿದೆ.

ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡೇ ರಾಜ್ಯ ಬಿಜೆಪಿ ಅಭ್ಯರ್ಥಿ ಹೆಸರನ್ನು ಶಿಫಾರಸ್ಸು ಮಾಡಲಿದೆ ಮತ್ತು ಹೈಕಮಾಂಡ್ ಕೂಡ ಎಚ್ಚರಿಕೆಯಿಂದಲೇ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ.

Facebook Comments