ರಾಜ್ಯಸಭೆ ಚುನಾವಣೆ : ಇವರೆಗೂ ಸಲ್ಲಿಕೆಯಾಗಿಲ್ಲ ಯಾವುದೇ ನಾಮಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.14- ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಮೂರು ದಿನ ಕಳೆದರೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ನವೆಂಬರ್ 11ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಳೆದ ಮೂರು ದಿನಗಳಲ್ಲಿ ಯಾವುದೇ ಪಕ್ಷ ಅಥವಾ ಯಾವೊಬ್ಬ ಅಭ್ಯರ್ಥಿಯೂ ಉಮೇದುವಾರಿಕೆ ಸಲ್ಲಿಸಿಲ್ಲ.

ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.  ಡಿಸೆಂಬರ್ 1ರಂದು ರಾಜ್ಯಸಭೆಗೆ ಮತದಾನ ನಡೆಯಬೇಕಿದೆ. ಆದರೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಈ ಚುನಾವಣೆ ಬಗ್ಗೆ ಯಾವುದೇ ಚರ್ಚೆ ಮಾಡಿದಂತೆ ಕಂಡುಬಂದಿಲ್ಲ.

ಆಡಳಿತಾರೂಢ ಬಿಜೆಪಿಗೆ ರಾಜ್ಯಸಭೆ ಚುನಾವಣೆ ಸುಲಭ ಗೆಲುವಾಗಲಿದೆ. ಹೀಗಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಚುನಾವಣೆಗೆ ಸ್ಪರ್ಧಿಸಿ ತಟಸ್ಥ ನಿಲುವು ತಳೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮತಗಳನ್ನು ಒಟ್ಟುಗೂಡಿಸಿದರೂ ಬಿಜೆಪಿ ಮತಗಳಿಗಿಂತ ಕಡಿಮೆಯಾಗಲಿದೆ.

ಅಲ್ಲದೆ, ರಾಜ್ಯಸಭೆ ಚುನಾವಣೆ ಸಂಬಂಧ ಉಭಯ ಪಕ್ಷಗಳ ನಡುವೆ ಯಾವುದೇ ಮಾತುಕತೆಯೂ ನಡೆದಿಲ್ಲ. ಜತೆಗೆ ಆಯಾ ಪಕ್ಷದ ವೇದಿಕೆಯಲ್ಲೂ ರಾಜ್ಯಸಭೆ ಚುನಾವಣೆ ಕುರಿತಂತೆ ಸಮಾಲೋಚನೆ ನಡೆಸಿಲ್ಲ.

ಬಿಜೆಪಿ ಕೂಡ ಈ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ನವೆಂಬರ್ 18 ಕಡೆಯ ದಿನವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ರಜೆ ಇದೆ. ಹೀಗಾಗಿ ದೀಪಾವಳಿ ನಂತರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.

Facebook Comments