ರಾಜ್ಯಸಭಾ ಚುನಾವಣೆ : ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆರ್‍ಎಸ್‍ಎಸ್ ಕಟ್ಟಾಳು ಡಾ.ಕೆ.ನಾರಾಯಣ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ರಾಜ್ಯ ಬಿಜೆಪಿ ಕೋರ್‍ಕಮಿಟಿ ಕಳುಹಿಸಿದ್ದ ಸದಸ್ಯರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬದಿಗಿರಿಸಿ ಅಚ್ಚರಿ ಎಂಬಂತೆ ಡಾ.ನಾರಾಯಣನ್‍ಗೆ ಟಿಕೆಟ್ ನೀಡಲಾಗಿದೆ.

ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಒಂದು ವೇಳೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಿದ್ದರೆ ಡಾ.ನಾರಾಯಣನ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ ಹಲವು ದಶಕಗಳಿಂದ ಆರ್‍ಎಸ್‍ಎಸ್‍ನಲ್ಲಿ ಗುರುತಿಸಿಕೊಂಡಿದ್ದ ನಾರಾಯಣನ್‍ಅವರು ಸಂಘದ ಕಟ್ಟಾಳಾಗಿ ಸೇವೆ ಸಲ್ಲಿಸಿದ್ದರು.

ಮೂರು ದಿನಗಳ ಹಿಂದೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಪಕ್ಷದ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನಾ, ವಿಧಾನಪರಿಷತ್ ಮಾಜಿ ಸದಸ್ಯ ಶಂಕರಪ್ಪ ಹಾಗೂ ಅಶೋಕ್ ಗಸ್ತಿ ಅವರ ಪತ್ನಿ ಸುಮಾ ಅವರ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಈ ಹಿಂದೆಯೂ ಬಿಜೆಪಿ ಎರಡು ರಾಜ್ಯಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋರ್‍ಕಮಿಟಿ ಕಳುಹಿಸಿದ ಹೆಸರುಗಳನ್ನು ಪಕ್ಕಕ್ಕಿಟ್ಟು ಅಶೋಕ್ ಗಸ್ತಿ ಹಾಗೂ ವೀರಣ್ಣ ಕಡಾಡಿ ಅವರುಗಳನ್ನು ನಾಮಕರಣ ಮಾಡಲಾಗಿತ್ತು.

ಈಗಿನ ವಿಧಾನಸಭೆಯ ಬಲಾಬಲ ಪ್ರಕಾರ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಯಾವುದೇ ಅಭ್ಯರ್ಥಿ ಆಯ್ಕೆಯಾಗಬೇಕಾದರೆ 112 ಮತಗಳನ್ನು ಪಡೆಯಬೇಕು. ಆಡಳಿತರೂಢ ಬಿಜೆಪಿ 119 ಸದಸ್ಯರನ್ನು ಹೊಂದಿದ್ದು, ಸಚಿವ ನಾಗೇಶ್ ಮತ್ತು ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರ ಬೆಂಬಲವೂ ಇದೆ.

ಇತ್ತ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇಷ್ಟು ಸಂಖ್ಯೆಯ ಸದಸ್ಯರನ್ನು ಹೊಂದಿಲ್ಲದ ಕಾರಣ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕ್ಷೀಣಿಸಿವೆ. ಹಾಗೊಂದು ವೇಳೆ ಯಾರೂ ನಾಮಪತ್ರ ಸಲ್ಲಿಸದಿದ್ದರೆ ನಾರಾಯಣನ್ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.

Facebook Comments