ರಾಜ್ಯಸಭೆಯಲ್ಲಿ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಪ್ರತಿಧ್ವನಿ :  ಭಾರೀ ಗದ್ದಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.19 (ಪಿಟಿಐ)- ದೆಹಲಿಯಲ್ಲಿ ಪ್ರತಿಭಟನಾನಿರತ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗ ಮತ್ತು ಬಂಧನ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ನಾಯಕರ ಗೃಹಬಂಧನ ವಿಷಯಗಳು ಸಂಸತ್ತಿನ ಮೇಲ್ಮನೆಯಲ್ಲಿ ಇಂದು ಪ್ರತಿಧ್ವನಿಸಿತು.

ವಿರೋಧ ಪಕ್ಷಗಳು ಸೃಷ್ಟಿಸಿ ಭಾರೀ ಗದ್ದಲ ಮತ್ತು ಕೋಲಾಹಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಎಡ ಪಕ್ಷಗಳು ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಈ ಎರಡು ವಿಷಯಗಳನ್ನು ಪ್ರಸ್ತಾಪಿಸಿದರು.

ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಸಂಪೂರ್ಣ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ನಿನ್ನೆ ಜೆಎನ್‍ಯು ವಿದ್ಯಾರ್ಥಿಗಳು ರಾಜಧಾನಿಯಲ್ಲಿ ಭಾರೀ ಪ್ರತಿಭಟನೆ ನಡೆಸಿ ಸಂಸತ್ತಿನತ್ತ ತೆರಳುತ್ತಿದ್ದಾಗ ಪೊಲೀಸರು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು. ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಈ ಎರಡೂ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳ ಸದಸ್ಯರು ಸಭಾಪತಿ ಡಾ. ಎಂ.ವೆಂಕಯ್ಯ ನಾಯ್ಡು ಅವರನ್ನು ಆಗ್ರಹಿಸಿದರು. ಈಗಾಗಲೇ ಕೆಲವು ವಿಚಾರಗಳ ಚರ್ಚೆಗೆ ನಿಲುವಳಿ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಪಟ್ಟಿ ಮಾಡಲಾದ ವಿಷಯಗಳ ಚರ್ಚೆಯನ್ನು ಕೈಬಿಡಲು ಸಾಧ್ಯವಿಲ್ಲ. ನೀವು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ. ಗದ್ದಲ ಇದೇ ರೀತಿ ಮುಂದುವರಿದರೆ ಸದನದ ಕಲಾಪವನ್ನು ಮುಂದೂಡುವುದಾಗಿ ವೆಂಕಯ್ಯನಾಯ್ಡು ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಆದರೆ ಸಭಾಪತಿ ಎಚ್ಚರಿಕೆಯನ್ನೂ ಲೆಕ್ಕಿಸದ ವಿರೋಧ ಪಕ್ಷಗಳ ಸದಸ್ಯರು ಈ ವಿಷಯಗಳ ಚರ್ಚೆಗೆ ಬಿಗಿಪಟ್ಟು ಹಿಡಿದು ಗಲಾಟೆ ಮುಂದುವರಿಸಿದರು. ಕೋಲಾಹಲದ ವಾತಾವರಣದ ನಡುವೆಯೂ ನಾಯ್ಡು ಶೂನ್ಯ ವೇಳೆ ಕಲಾಪ ನಡೆಸಲು ಮುಂದಾದರು. ಆದರೆ ಗದ್ದಲ ಯಥಾಸ್ಥಿತಿ ಮುಂದುವರಿದ ಕಾರಣ ಅಸಮಾಧಾನಗೊಂಡ ಸಭಾಪತಿ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇದಕ್ಕೂ ಮೊದಲು ವೆಂಕಯ್ಯ ನಾಯ್ಡು ಅವರು ಸೆಪ್ಟೆಂಬರ್ 6ರಂದು ನಿಧನರಾದ ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರಿಗೆ ಸಂತಾಪ ಸೂಚಿಸಿದರು. ಇದೇ ವೇಳೆ ಅರ್ಥಶಾಸ್ತ್ರದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಅವರ ಸಾಧನೆಯನ್ನು ನಾಯ್ಡು ಪ್ರಶಂಸಿಸಿದರು.

Facebook Comments