ರಾಜ್ಯಸಭೆಯಲ್ಲಿ ನಾಳೆ ಪೌರತ್ವ ಮಸೂದೆ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.10-ಭಾರೀ ವಿರೋಧಗಳ ನಡುವೆ ಲೋಕಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆ ನಾಳೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ ಮೇಲ್ಮನೆಯಲ್ಲಿಯೂ ಈ ವಿಧೇಯಕಕ್ಕೆ ಅನುಮೋದನೆ ಲಭಿಸಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ.

ಲೋಕಸಭೆಯಲ್ಲಿ ನಿನ್ನೆ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಸುದೀರ್ಘ ಚರ್ಚೆ ನಂತರ ಮಧ್ಯರಾತ್ರಿ ಈ ವಿಧೇಯಕಕ್ಕೆ ಅಂಗೀಕಾರ ಲಭಿಸಿತ್ತು.  ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸದಸ್ಯರು ಅಧಿಕ ಸಂಖ್ಯೆಯಲ್ಲಿರುವುದರಿಂದ ಈ ಮಸೂದೆಗೆ ಅನುಮೋದನೆ ದೊರೆಯುವುದು ಬಹುತೇಕ ಖಚಿತವಾಗಿದೆ.

ರಾಜ್ಯಸಭೆಯಲ್ಲಿ 238 ಸದಸ್ಯರಿದ್ದು, ಎನ್‍ಡಿಎ ಪ್ರಸ್ತುತ 105 ಸದಸ್ಯ ಬಲ(ಬಿಜೆಪಿ-83, ಜೆಡಿಯು-6, ಶಿರೋಮಣಿ ಅಕಾಲಿ ದಳ-3, ಎಲ್‍ಜೆಪಿ, ಮತ್ತು ಆರ್‍ಪಿಐಎ ತಲಾ ಒಂದೊಂದು ಸ್ಥಾನ) ಹೊಂದಿದೆ. ಅಲ್ಲದೇ ಎಐಎಡಿಎಂಕೆ, ಬಿಜೆಡಿ, ವೈಎಸ್‍ಆರ್‍ಸಿಪಿ ಮತ್ತು ಟಿಡಿಪಿ ಲೋಕಸಭೆಯಲ್ಲಿ ಈ ಮಸೂದೆಗೆ ಬೆಂಬಲ ನೀಡಿದ್ದು, ರಾಜ್ಯಸಭೆಯಲ್ಲಿಯೂ ಇದು ಮುಂದುವರಿಯುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ.

Facebook Comments