ರಾಜ್ಯಸಭೆಯಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿಗೆ ಹೊಸ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.25- ಏಪ್ರಿಲ್‍ನಲ್ಲಿ ತೆರವಾಗಲಿರುವ ರಾಜ್ಯಸಭೆಯ 55 ಸ್ಥಾನಗಳನ್ನು ಭರ್ತಿ ಮಾಡಲು ಮಾರ್ಚ್ 26ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.  ಮಹಾರಾಷ್ಟ್ರ ಸೇರಿದಂತೆ 17 ರಾಜ್ಯಗಳಲ್ಲಿ ಏಪ್ರಿಲ್ ತಿಂಗಳ ವಿವಿಧ ದಿನಾಂಕಗಳಂದು 55 ಮೇಲ್ಮನೆ ಸದಸ್ಯರು ನಿವೃತ್ತರಾಗಲಿದ್ದಾರೆ.  ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ದ್ವೈವಾರ್ಷಿಕ ಚುನಾವಣೆಗಾಗಿ ಮಾರ್ಚ್ 6ರಂದು ಅಧಿಸೂಚನೆ ಪ್ರಕಟವಾಗಲಿದೆ.

ಮಾರ್ಚ್ 13ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಮಾರ್ಚ್ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು,  ಮಾ.18ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮಾರ್ಚ್ 26ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೂ ಚುನಾವಣೆ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಎಣಿಕೆ ಕಾರ್ಯ ನಡೆಯಲಿದೆ. ಮಹಾರಾಷ್ಟ್ರದ 7 ಮಂದಿ, ಒಡಿಶಾ, 4, ತಮಿಳುನಾಡು 6, ಪಶ್ಚಿಮ ಬಂಗಾಳದ 5 ಮಂದಿ, ಏಪ್ರಿಲ್ 2ರಂದು, ಆಂಧ್ರ ಪ್ರದೇಶ, ಗುಜರಾತ್ ತಲಾ 4, ತೆಲಂಗಾಣ, ಹರಿಯಾಣ, ಜಾರ್ಖಾಂಡ್ ಹಾಗೂ ಛತ್ತೀಸ್‍ಗಢದ ತಲಾ 2, ಬಿಹಾರ 5, ಅಸ್ಸೋಂ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ತಲಾ 3 ಮಂದಿ, ಹಿಮಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿ ತಲಾ ಒಬ್ಬರು ಏಪ್ರಿಲ್ 9ರಂದು ನಿವೃತ್ತರಾಗಲಿದ್ದಾರೆ.

ಮೇಘಾಲಯದ ಒಬ್ಬ ಸದಸ್ಯರು ಏ.12ರಂದು ನಿವೃತ್ತರಾಗಲಿದ್ದಾರೆ. ಇಷ್ಟೂ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ.ಮಾ.26ರಂದು ನಡೆಯುವ ರಾಜ್ಯಸಭೆಯ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಅತ್ಯಂತ ಮಹತ್ವದ ಘಟ್ಟವಾಗಲಿದೆ. ಯಾವುದೇ ಪ್ರಮುಖ ಕಾನೂನುಗಳನ್ನು ಜಾರಿ ಮಾಡಬೇಕಾದರೆ ಸರ್ಕಾರಕ್ಕೆ ಸಂಖ್ಯಾಬಲದ ಬಹುಮತ ಅತ್ಯಗತ್ಯ.

ಲೋಕಸಭೆ 543 ಸದಸ್ಯರ ಪೈಕಿ ಬಿಜೆಪಿ 305 ಸದಸ್ಯರನ್ನು ಹೊಂದಿದ್ದು, ಮಿತ್ರ ಪಕ್ಷಗಳು ಸೇರಿದಂತೆ ಯಾರ ಸಹಾಯವೂ ಇಲ್ಲದೆ ಕಾನೂನಿಗೆ ಅಂಗೀಕಾರ ಪಡೆದುಕೊಳ್ಳುವ ಸಾಮಥ್ರ್ಯ ಹೊಂದಿದೆ. ಆದರೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಕೊರತೆಯನ್ನು ಎದುರಿಸುತ್ತಿದೆ. ಒಟ್ಟು 239 ಸದಸ್ಯರ ಪೈಕಿ ಬಿಜೆಪಿ 82, ಕಾಂಗ್ರೆಸ್ 46, ತೃಣಮೂಲ ಕಾಂಗ್ರೆಸ್ 13, ಸಿಪಿಐಎಂ 5, ಡಿಎಂಕೆ 5, ಎನ್‍ಸಿಪಿ 4, ಬಿಎಸ್‍ಪಿ 4, ರಾಷ್ಟ್ರೀಯ ಜನತಾದಳ 4, ಶಿವಸೇನೆ 3, ಎಐಎಡಿಎಂಕೆ 11, ಸಮಾಜವಾದಿ ಪಕ್ಷ 9, ಬಿಜು ಜನತಾದಳ 7, ಜೆಡಿಯು 6, ಟಿಆರ್‍ಎಸ್ 6 ಸೇರಿದಂತೆ ವಿವಿಧ ಪಕ್ಷಗಳು ಸ್ಥಾನಮಾನವನ್ನು ಹೊಂದಿವೆ.

ಬಿಜೆಪಿ ತನ್ನ ಮಿತ್ರಪಕ್ಷಗಳನ್ನೆಲ್ಲಾ ಒಗ್ಗೂಡಿಸಿದರೂ 107ರ ಸಂಖ್ಯಾಬಲ ದಾಟುತ್ತಿಲ್ಲ. ಟಿಆರ್‍ಎಸ್, ಶಿವಸೇನೆ, ವೈಎಸ್‍ಆರ್‍ನಂತಹ ಪಕ್ಷಗಳ ಸಹಾಯ ಪಡೆದರೆ 126 ಸಂಖ್ಯಾಬಲವನ್ನು ಸಾಧಿಸಬಹುದು. ಆದರೆ, ಕೆಲವು ಪಕ್ಷಗಳು ವಿಷಯಾಧಾರಿತವಾಗಿ ಬೆಂಬಲ ನೀಡಲಿದ್ದು, ಕೆಲವು ಬಾರಿ ವಿರೋಧ ವ್ಯಕ್ತಪಡಿಸುತ್ತವೆ. ಹಾಗಾಗಿ ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಎನ್‍ಡಿಎ ಸರ್ಕಾರಕ್ಕೆ ಹಿಂದೆ-ಮುಂದೆ ನೋಡುವಂತಾಗಿದೆ.

ರಾಜ್ಯಸಭೆಯಲ್ಲಿ 120ಕ್ಕಿಂತ ಹೆಚ್ಚಿನ ಸಂಖ್ಯಾಬಲ ಹೊಂದಿದ್ದೇ ಆದರೆ ಮೋದಿ ಸರ್ಕಾರ ಯಾವುದೇ ಕಾನೂನುಗಳನ್ನು ನಿರಾಂತಕವಾಗಿ ಜಾರಿಗೊಳಿಸಲು ಅವಕಾಶವಿದೆ. ಇತ್ತೀಚೆಗೆ 2018ರ ಡಿಸೆಂಬರ್‍ನಲ್ಲಿ ನಡೆದ 7 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಕಡೆ ಬಿಜೆಪಿ ಹಿನ್ನಡೆ ಅನುಭವಿಸಿದೆ. ಈಗ ಘೋಷಣೆಯಾಗಿರುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಕುತೂಹಲ ಕೆರಳಿಸಿದೆ.

ಅಂದಾಜಿನ ಪ್ರಕಾರ ತಮಿಳುನಾಡು, ಜಾರ್ಖಾಂಡ್, ಆಂಧ್ರಪ್ರದೇಶ, ತೆಲಂಗಾಣ, ಮೇಘಾಲಯ, ಅರುಣಾಚಲಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆಗಳಿಲ್ಲ. ಬದಲಾಗಿ ಮಹಾರಾಷ್ಟ್ರದಲ್ಲಿ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆದ್ದು, ಮೂರನೇ ಸ್ಥಾನಕ್ಕೆ ಪೈಪೋಟಿ ನೀಡುವ ಸಾಮಥ್ರ್ಯ ಉಳಿಸಿಕೊಂಡಿದೆ.ರಾಜಸ್ತಾನದಲ್ಲಿ ಒಟ್ಟು 200 ಶಾಸಕರಿದ್ದು, ಮೂರು ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದು, ಎರಡನೇ ಸ್ಥಾನಕ್ಕೆ ಪೈಪೋಟಿ ನೀಡುವ ಸಾಧ್ಯತೆ ಇದೆ. ಆಡಳಿತಾರೂಢ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲುವ ತಯಾರಿ ನಡೆಸುವ ಸಾಧ್ಯತೆ ಇದೆ.

ಮಧ್ಯ ಪ್ರದೇಶದ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನ ಗೆಲ್ಲಲಿವೆ. ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದ್ದು, ಜಿದ್ದಾಜಿದ್ದಿನ ರಾಜಕಾರಣ ಎದುರಾಗಲಿದೆ.ಅಸ್ಸೋಂನಲ್ಲಿ ಎರಡು ಸ್ಥಾನ ಗೆದ್ದರೆ, ರಾಜಸ್ಥಾನದಲ್ಲಿ 2 ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಗುಜರಾತ್‍ನಲ್ಲಿ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಬಹುದು. ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜುಲೈ ಅಂತ್ಯದವರೆಗೂ ಬಿಜೆಪಿ ತನ್ನ ಸ್ಥಾನಗಳನ್ನು ಭದ್ರ ಪಡಿಸಿಕೊಳ್ಳುವ ನಿರೀಕ್ಷೆ ಇದೆ. ಆದರೆ, ವರ್ಷಾಂತ್ಯಕ್ಕೆ ಬಿಜೆಪಿಯ ಸಂಖ್ಯಾಬಲದಲ್ಲಿ ಏರಿಕೆಯಾಗುವ ನಿರೀಕ್ಷೆಗಳಿವೆ.

ನಿವೃತ್ತರಾಗಲಿರುವ ಸದಸ್ಯರು: ಮಹಾರಾಷ್ಟ್ರದ ಹುಸೇನ್ ಉಮ್ಮರ್ ಕಲ್ವಾನಿ, ಅಮರ್‍ಶಂಕರ್ ಸಾಬ್ಲೆ, ರಾಜ್‍ಕುಮಾರ್ ನಂದಲಾಲ್ ದಾಹೋತ್, ಅಬ್ದುಲ್ ಮಜೀದ್ ಆಜಿ ಅಹಮ್ಮದ್, ರಾಮದಾಸ್ ಅತಾವಳೆ, ಸಂಜಯ್‍ದತ್ತಾತ್ರೇಯ ಕಾಕಡೆ, ಒಡಿಸ್ಸಾದ ಅನುಭವ್ ಮೋಹಂತಿ, ನರೇಂದ್ರ ಕುಮಾರ್ ಸ್ವಾಹಿನ್, ಸರೋಜಿನಿ ಇಬ್ರಾಂ, ರಣಜೀಬ್ ಬಿಸ್ವಾಲ್, ತಮಿಳುನಾಡಿನ ಶಶಿಕಲಾ ಪುಷ್ಪಾ, ಕೆ.ಸೆಲ್ವರಾಜ್, ತಿರುಚಿ ಶಿವ, ಎಸ್.ಮುತ್ತುಕರುಪನ್, ರಂಗರಾಜನ್, ವಿಜಿಲ ಸತ್ಯನಾಥನ್.

ಪಶ್ಚಿಮ ಬಂಗಾಳದ ರಿತಬ್‍ಬ್ರಾತ ಬ್ಯಾನರ್ಜಿ, ಜೋಗೇಂದ್ರ ನಾಥ್ ಚೌದರಿ, ಡಾ.ಕನ್ವರ್ ದೀಪ್‍ಸಿಂಗ್, ಮನೀಷ ಗುಪ್ತಾ, ಅಹಮ್ಮದ್ ಅಸನ್, ಆಂಧ್ರಪ್ರದೇಶದ ಮೊಹಮ್ಮದ್ ಆಲೀಖಾನ್, ಟಿ.ಸುಬ್ರಹ್ಮಣ್ಯ ರೆಡ್ಡಿ, ತೋತಾ ಸೀತರಾಮಲಕ್ಷ್ಮಿ, ಕೇಶವರಾವ್, ತೆಲಂಗಾಣದ ಕೆ.ವಿ.ಪಿ.ರಾಮಚಂದ್ರರಾವ್, ಗರಿಕಪತಿ ಮೋಹನ್‍ರಾವ್, ಅಸ್ಸೋಂನ ಬಬುನೇಶ್ವರ್ ಕಲಿಟ, ಡಾ.ಸಂಜಯ್‍ಸಿನ್, ಬಿಸ್ವಜಿತ್ ದೈಮಾರಿ, ಬಿಹಾರದ ಕಕ್ಷಹಾಣ್ ಪ್ರಿವೀನ್, ರವೀಂದ್ರ ಕಿಶೋರ್ ಸಿನ್ಹ, ರಾಮನಾಥ್ ಠಾಕೋರ್, ಹರಿಬನಸ್ ನಾರಾಯಣ ಸಿಂಗ್, ಸಿ.ಪಿ.ಠಾಕೋರ್.

ಛತ್ತೀಸ್‍ಗಢದ ರಣವಿಜಯ್ ಪ್ರತಾಪ್‍ಸಿಂಗ್ ಜಾದವ್, ಮೋತಿಲಾಲ್ ಓರಾ, ಗುಜರಾತ್‍ನ ಗೋಯಲ್ ಚುನಿಬಾಯಿ ಕಣಜಿಬಾಯಿ, ಮಿಸ್ತ್ರಿ ಮಧುಸೂದನ್ ದೇವರಾಮ್, ಒಡೋದಿಯಾಲಾಲ್‍ಸಿನ ಉದೇಸಿನಾ, ತುಂದಿಯಾ ಶ್ಯಾಮ್‍ಪ್ರಸಾದ್ ಬಲದೇವ್‍ದಾಸ್‍ಜಿ, ಹರಿಯಾಣದ ರಾಮ್‍ಕುಮಾರ್, ಕುಮಾರಿ ಸೆಲ್ಜಾ, ಹಿಮಾಚಲ ಪ್ರದೇಶದ ವಿಪ್ಲವ್ ಠಾಕೂರ್, ಜಾರ್ಖಂಡ್‍ನ ನಟ್ವಾಣಿ ಪರಿಮಾಲ್, ಪ್ರೇಮಚೆಂದ್ ಗುಪ್ತಾ, ಮಧ್ಯ ಪ್ರದೇಶದ ದಿಗ್ವಿಜಯ್‍ಸಿಂಗ್, ಪ್ರಭಾತ್, ಸತ್ಯನಾರಾಯಣ ಜಾಟಿಯಾ.  ಮಣಿಪುರದ ಕ್ಷೇತ್ರಿಯಂ ಬಹಬಂದನ್‍ಸಿಂಗ್, ರಾಜಸ್ತಾನದ ನಾರಾಯಣಲಾಲ್ ಪಂಚೋರಿಯಾ, ರಾಮ್‍ನಾರಿಯನ್ ದುದಿ, ವಿಜಯ್‍ಗೋಯಲ್, ಮೇಘಾಲಯದ ವಾಂಗ್‍ಕ್ಷುಕ್ ಶಹಿಮ್ ಅವರುಗಳು ನಿವೃತ್ತರಾಗಲಿದ್ದಾರೆ.

Facebook Comments