ರಾಜ್ಯ ಸಭೆ ಉಪಚುನಾವಣೆಯಿಂದ ಹಿಂದೆ ಸರಿದ ಜೆಡಿಎಸ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೇ ದಿನ. ರಾಜ್ಯ ಸಭೆಯ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಇದುವರಗೂ ಮೂರು ಮಂದಿ ಉಮೇದುದಾರರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಈ ತನಕ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ರಾಜ್ಯ ವಿಧಾನಸಭೆಯಲ್ಲಿ 34 ಶಾಸಕರನ್ನು ಹೊಂದಿರುವ ಜೆಡಿಎಸ್‍ಗೆ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಹಾಗೂ ಪಕ್ಷೇತರರ ಬೆಂಬಲವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಸಭೆ ಚುನಾವಣೆಯಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‍ನಿಂದ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಪ್ರಸ್ತಾಪವಾಗುತ್ತಿದೆಯಾದರೂ ರಾಜ್ಯಸಭೆಗೆ ಅವರು ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.  66 ಶಾಸಕರನ್ನು ಹೊಂದಿರುವ ಕಾಂಗ್ರೆಸ್‍ಗೂ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಪ್ರಸಕ್ತ ವಿಧಾನಸಭೆ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ಪರಸ್ಪರ ಎದುರಾಳಿಗಳಾಗಿ ಹೋರಾಡುತ್ತಿವೆ.

ರಾಜ್ಯಸಭೆ ಚುನಾವಣೆಯ ಮೈತ್ರಿ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಯಾವುದೇ ಚರ್ಚೆಯೂ ಆಗಿಲ್ಲ. ಆಡಳಿತಾರೂಢ ಬಿಜೆಪಿ ವಿಧಾನಸಭೆಯಲ್ಲಿ 104 ಶಾಸಕರನ್ನು ಹೊಂದಿದ್ದು, ಬಿಜೆಪಿ ಅಭ್ಯರ್ಥಿಯ ಗೆಲುವಿನ ಹಾದಿ ಸದ್ಯಕ್ಕೆ ಸುಗಮವಾಗಿದೆ. ಬಿಎಸ್‍ಪಿ-1, ಪಕ್ಷೇತರ-1, ವಿಧಾನಸಭಾಧ್ಯಕ್ಷರ ಒಂದು ಸ್ಥಾನ ಸೇರಿದಂತೆ ವಿಧಾನಸಭೆಯಲ್ಲಿ 207 ಸದಸ್ಯರಿದ್ದಾರೆ.

ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಡಿ.9 ರಂದು ಫಲಿತಾಂಶ ಹೊರಬೀಳಲಿದೆ.ಹೀಗಾಗಿ ರಾಜ್ಯಸಭೆ ಚುನಾವಣೆ ನಡೆಯುವ ಡಿ.12ರ ವೇಳೆಗೆ ವಿಧಾನಸಭೆ ಸದಸ್ಯರ ಬಲ 222ಕ್ಕೆ ಏರಿಕೆಯಾಗಲಿದೆ. ಆದರೆ ವಿಧಾನಸಭೆಯ ನಾಮಕರಣ ಸದ್ಯರಿಗೆ ಮತಹಾಕುವ ಹಕ್ಕಿಲ್ಲ. ಹೀಗಾಗಿ ರಾಜ್ಯಸಭೆಗೆ ಆಯ್ಕೆಯಾಗಲು ಕನಿಷ್ಠ 112 ಶಾಸಕರ ಮತ ಪಡೆಯಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಡಿ.3ರಂದು ರಾಜ್ಯಸಭೆಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.5ರವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಯಾವುದೇ ಶಾಸಕರು ಸೂಚಕರಾಗಿ ಸಹಿ ಮಾಡಿಲ್ಲ. ಹಾಗೆಯೇ ವಿಜಯಪುರ ಮೂಲದ ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ ಉರುಫ್ ದೀಪಕ್ ಎಂಬುವರು ಬಿಜೆಪಿ, ಹಿಂದೂಸ್ತಾನ್ ಜನತಾ ಪಾರ್ಟಿ ಹಾಗೂ ಪಕ್ಷೇತರರಾಗಿ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಇವರಿಗೆ ಯಾವುದೇ ಶಾಸಕರು ಸೂಚಕರಾಗಿ ಸಹಿ ಹಾಕಿಲ್ಲ. ಹೀಗಾಗಿ ಇವರಿಬ್ಬರ ನಾಮಪತ್ರಗಳು ತಿರಸ್ಕøತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸೋಮವಾರದೊಳಗೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಿದ್ದರೆ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Facebook Comments