ರಾಜ್ಯಸಭೆಗೆ ಕೆ.ಸಿ.ರಾಮಮೂರ್ತಿ ಅವಿರೋಧ ಆಯ್ಕೆ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೆ ಸರಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಮೈತ್ರಿ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಸೋಮವಾರ ಎರಡು ಪಕ್ಷಗಳಿಂದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಕಣದಿಂದ ಹಿಂದೆಸರಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರೇ ಆಯ್ಕೆಯಾಗುವುದು ಖಚಿತವಾಗಿದೆ.

ಪಕ್ಷೇತರವಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಆ ಇಬ್ಬರಿಗೆ ಯಾವ ಶಾಸಕರೂ ಸೂಚಕರಾಗಿ ಸಹಿ ಹಾಕಿಲ್ಲ. ಹೀಗಾಗಿ ನಾಳೆ ನಡೆಯುವ ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ಅವರಿಬ್ಬರ ನಾಮಪತ್ರಗಳು ತಿರಸ್ಕøತವಾಗುವ ಸಾಧ್ಯತೆ ಇದೆ. ನಾಮಪತ್ರ ವಾಪಸ್ ಪಡೆಯಲು ಡಿ.5ರವರೆಗೆ ಕಾಲಾವಕಾಶವಿದೆ. ಅಂದು ಸಂಜೆ ಕೆ.ಸಿ.ರಾಮಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಚುನಾವನಾಣಾಧಿಕಾರಿಯೂ ಆಗಿರುವ ವಿದಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅಧಿಕೃತವಾಗಿ ಘೋಷಣೆ ಮಾಡುವ ಸಂಭವವಿದೆ.

ಕಾಂಗ್ರೆಸ್‍ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೆ.ಸಿ.ರಾಮಮೂರ್ತಿ ಕೆಲ ದಿನಗಳಿಂದ ಹಿಂದೆ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಸಿ.ರಾಮಮೂರ್ತಿ ಬಿಜೆಪಿ ಸೇರಿದ್ದು, ಈಗ ರಾಜ್ಯಸಭೆಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಆಧಾರದ ಮೇಲೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಾನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಸಮಾಲೋಚನೆ ನಡೆಸಿದ್ದವಾದರೂ ನಾಮಪತ್ರ ಸಲ್ಲಿಸುವ ಕಡೆ ಗಳಿಗೆಯವರೆಗೂ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಫಲಿತಾಂಶ ಏರುಪೇರಾದರೆ ಅದರ ಲಾಭವನ್ನು ಪಡೆಯಲು ಮತ್ತೆ ದೋಸ್ತಿ ಪಕ್ಷಗಳು ಕೈ ಜೋಡಿಸಲು ಮುಂದಾಗಿದ್ದವು.

Facebook Comments

Sri Raghav

Admin