ರಾಜ್ಯೋತ್ಸವ ಸಂಭ್ರಮಕ್ಕೆ ನೀತಿ ಸಂಹಿತೆ ಅಡ್ಡಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.30- ಕರುನಾಡು 65ನೇ ವರ್ಷದ ಕನ್ನಡ ರಾಜ್ಯೋತ್ಸವದ ಹುಮ್ಮಸ್ಸಿನಲ್ಲಿದೆ. ಆದರೆ ಈ ಬಾರಿಯ ರಾಜ್ಯೋತ್ಸವ ಸಂಭ್ರಮಕ್ಕೆ ಚುನಾವಣಾ ನೀತಿ ಸಂಹಿತೆ ಹಾಗೂ ಕೋವಿಡ್ ಕರಿಛಾಯೆ ಆವರಿಸಿದೆ. ನವೆಂಬರ್ 1ರಂದು ರಾಜ್ಯ 65ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲು ಸಜ್ಜುಗೊಂಡಿದೆ. ರಾಜ್ಯಾದ್ಯಂತ ಕನ್ನಡದ ಕಂಪು, ಡಿಂಡಿಮ ಪ್ರತಿಧ್ವನಿಸುವ ಮಾಸ. ಕರುನಾಡ ಮೂಲೆ ಮೂಲೆಯಲ್ಲಿ ಕನ್ನಡದ ಪ್ರೇಮ, ಕಂಪು, ಸಂಭ್ರಮ ಮನೆ ಮಾಡಿರುತ್ತದೆ.

ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಕೋವಿಡ್-19 ಮತ್ತು ಚುನಾವಣಾ ನೀತಿ ಸಂಹಿತೆ ಅಂಕುಶ ಹಾಕಿದೆ. ಒಂದೆಡೆ ಕೋವಿಡ್ ಮಾರ್ಗಸೂಚಿ, ಇನ್ನೊಂದೆಡೆ ವಿಧಾನಪರಿಷತ್  ಚುನಾವಣೆ, ಆರ್.ಆರ್.ನಗರ ಮತ್ತು ಶಿರಾ ಉಪ ಚುನಾವಣೆಯ ನೀತಿ ಸಂಹಿತೆ ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ನಿರ್ಬಂಧ ಹೇರಿದೆ. ಕೋವಿಡ್ ಹಾಗೂ ಚುನಾವಣಾ ನೀತಿ ಸಂಹಿತೆ ಮಧ್ಯೆ ಈ ಬಾರಿ ಸರಳ ರಾಜ್ಯೋತ್ಸವ ಆಚರಣೆ ನಡೆಸುವ ಅನಿವಾರ್ಯತೆ ನಾಡಿನ ಜನತೆಯದ್ದು ಹಾಗೂ ಸರ್ಕಾರದ್ದು.

# ಚುನಾವಣಾ ನೀತಿ ಸಂಹಿತೆಯ ಅಡ್ಡಿ:
ಈ ಬಾರಿ ಚುನಾವಣಾ ನೀತಿ ಸಂಹಿತೆ ರಾಜ್ಯೋತ್ಸವದ ಸಂಭ್ರಮಕ್ಕೆ ಅಂಕುಶ ಹಾಕಿದೆ. ನಾಲ್ಕು ಸ್ಥಾನಗಳಿಗಾಗಿ ವಿಧಾನಪರಿಷತ್ ಚುನಾವಣೆ ಹಾಗೂ ಎರಡು ಉಪ ಚುನಾವಣೆ ರಾಜ್ಯೋತ್ಸವದ ಆಚರಣೆಯನ್ನು ಸರಳವಾಗಿಸಿದೆ. ಚುನಾವಣೆ ನಡೆದ ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಗಳನ್ನು ವ್ಯಾಪಿಸಿದೆ.

ಇನ್ನು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿದೆ. ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಬೀದರ್ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ವ್ಯಾಪಿಸಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ವ್ಯಾಪಿಸಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಉಳಿದಂತೆ ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಯ ನೀತಿ ಸಂಹಿತೆಯೂ ಜಾರಿಯಲ್ಲಿದೆ. ಹೀಗಾಗಿ ಕನ್ನಡ ರಾಜ್ಯೋತ್ಸವಕ್ಕೆ ನೀತಿ ಸಂಹಿತೆ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಸಿಎಂ ಆಗಲಿ, ಸಚಿವರಾಗಲಿ ರಾಜೋತ್ಸವ ಆಚರಣೆ ವೇಳೆ ಯಾವುದೇ ರಾಜಕೀಯ ಭಾಷಣ ಮಾಡುವಂತಿಲ್ಲ. ಸಿಎಂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಆಚರಿಸುತ್ತಿದ್ದರೆ, ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆದರೆ ರಾಜ್ಯೋತ್ಸವದ ಭಾಷಣದ ವೇಳೆ ಯಾವುದೇ ಸರ್ಕಾರದ ಸಾಧನೆ, ಯೋಜನೆಗಳು ಹಾಗೂ ರಾಜಕೀಯ ಭಾಷಣ ಮಾಡುವಂತಿಲ್ಲ.

ಸಂಭ್ರಮಕ್ಕೆ ಕೋವಿಡ್ ಬ್ರೇಕ್: ಒಂದೆಡೆ ಚುನಾವಣಾ ನೀತಿ ಸಂಹಿತೆಯ ಅಡ್ಡಿ, ಇನ್ನೊಂದೆಡೆ ಕೋವಿಡ್-19 ಈ ಬಾರಿ ರಾಜ್ಯೋತ್ಸವದ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಕೋವಿಡ್-19 ಮಾರ್ಗಸೂಚಿ ಜಾರಿಯಲ್ಲಿದ್ದು, 50ಕ್ಕಿಂತ ಹೆಚ್ಚಿಗೆ ಜನ ಜಮಾವಣೆ, ಸಭೆ ಸಮಾರಂಭ ನಡೆಸುವಂತಿಲ್ಲ.

ಹಾಗಾಗಿ ಈ ಬಾರಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಬೇಕಾದ ಅನಿವಾರ್ಯತೆ ಕನ್ನಡ ಪರ ಸಂಘಟನೆಗಳದ್ದಾಗಿವೆ. ಸಾಮಾನ್ಯವಾಗಿ ರಾಜ್ಯದೆಲ್ಲೆಡೆ ವಿವಿಧ ಸಂಘ ಸಂಸ್ಥೆಗಳು ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ತಿಂಗಳು ಪೂರ್ತಿ ಆಚರಿಸುತ್ತವೆ. ಆದರೆ, ಕೊರೊನಾ ಈ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದು, ಸರಳವಾಗಿ, ಕಡಿಮೆ ಜನ ಸೇರುವುದರೊಂದಿಗೆ ಕನ್ನಡದ ಡಿಂಡಿಮ ಭಾರಿಸುವ ಅನಿವಾರ್ಯತೆ ಎದುರಾಗಿದೆ.

Facebook Comments