ನಿಜವಾದ ಡ್ರಗ್ ಡೀಲರ್, ಡ್ರಗ್ ಪೆಡ್ಲರ್ ನರೇಂದ್ರ ಮೋದಿ : ರಕ್ಷಾ ರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್, ಪೆಡ್ಲರ್ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿರುವ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ, ನಿಜವಾದ ಡ್ರಗ್ ಡೀಲರ್, ಡ್ರಗ್ ಪೆಡ್ಲರ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಟೀಕಿಸಿದ್ದಾರೆ.

ಗುಜರಾತ್‍ನ ಅದಾನಿ ಬಂದರಿನಲ್ಲಿ ಮೂರು ಸಾವಿರ ಕೆ.ಜಿ. ಹೆರಾಯಿನ್ ಪತ್ತೆಯಾಗಿದೆ. ಈ ಬಗ್ಗೆ ಯಾವುದಾದರೂ ತನಿಖೆ ನಡೆಯುತ್ತಿದೆಯೇ? ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ. ಗುಜರಾತ್ ಅತಿ ಹೆಚ್ಚು ಮಂದಿ ಡ್ರಗ್ ಪೆಡ್ಲರ್ ಗಳ ತಾಣವಾಗಿದೆ. ಇವರನ್ನು ದೊಡ್ಡ ದೊಡ್ಡ ರಾಜಕಾರಣಿಗಳು ಪೋಷಿಸುತ್ತಿದ್ದಾರೆ. ತಮ್ಮ ರಾಜ್ಯದ ಈ ಅಕ್ರಮ ವ್ಯವಹಾರದ ಬಗ್ಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‍ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದರೂ, ಕಾಳಸಂತೆಯಲ್ಲಿ ಅತಿ ಹೆಚ್ಚು ಮದ್ಯ ಸಿಗುತ್ತಿದೆ. ಮದ್ಯ ಮಾರಾಟ ತಡೆಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಇದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಅರ್ಥಮಾಡಿಕೊಂಡು ಇನ್ನೊಬ್ಬರ ಬಗ್ಗೆ ಸದಾಶಯದಿಂದ ಮಾತನಾಡ ಬೇಕು ಎಂದು ಸಲಹೆ ನೀಡಿದ್ದಾರೆ.

ಕಟೀಲ್ ಅವರದ್ದು ಅತ್ಯಂತ ಕೀಳು ಅಭಿರುಚಿಯ ಮತ್ತು ಹತಾಶೆಯ ಹೇಳಿಕೆ ಯಾಗಿದೆ. ಅವರನ್ನು ನಿಮಾನ್ಸ್  ಗೆ ಸೇರಿಸಲು ನಮ್ಮ ಪಕ್ಷದಿಂದ ಈಗಾಗಲೇ ಆಂಬುಲೆನ್ಸ್ ಅನ್ನು ಬಿಜೆಪಿ ಕಚೇರಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಇದೇ ರೀತಿ ರಾಹುಲ್ ಗಾಂಧಿ ಅವರ ಬಗ್ಗೆ ಕೀಳಾಗಿ ಟೀಕಿಸಿರುವ ಮತ್ತೊರ್ವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಮ್ಹಾನ್ಸ್‍ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು. ಈ ಇಬ್ಬರು ನಾಯಕರಿಗೆ ಚಿಕಿತ್ಸೆ ಕೊಡಿಸಲಾಗುವುದು ಮತ್ತು ಅವರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Facebook Comments