ಉಪವಾಸ, ಧ್ಯಾನ, ಪ್ರಾರ್ಥನೆಯ ರಂಜಾನ್ ಮಹತ್ವ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಅಲ್ಲಾನ ಅನುಸರಣೆ ಮತ್ತು ವಿಧೇಯತೆಯಾಗಿರುವುದರಿಂದ ಈ ಧರ್ಮವನ್ನು ಇಸ್ಲಾಂ ಎಂದು ಹೆಸರಿಸಲಾಗಿದೆ.  ಇಸ್ಲಾಂಗೆ ವೃತ್ತಿ, ದೇಶ ಅಥವಾ ಜನಾಂಗದೊಂದಿಗೆ ಯಾವ ಸಂಬಂಧವೂ ಇಲ್ಲ. ಅದು ಇಸ್ಲಾಂ ಎಂಬ ಗುಣವನ್ನು ಜನರಲ್ಲಿ ಬೆಳೆಸಲು ಬಯಸುತ್ತದೆ.

ಇಸ್ಲಾಂ ಧರ್ಮದವರಿಗೆ ಬಕ್ರೀದ್, ಈದ್ ಮಿಲಾದ್, ಮೊಹರಂ, ರಂಜಾನ್ ಹೀಗೆ ಅನೇಕ ಹಬ್ಬಗಳಿವೆ. ಈ ರಂಜಾನ್ ಹಬ್ಬದ ಹೆಸರಾದರೂ ಇದು ಒಂದು ತಿಂಗಳ ಹೆಸರೂ ಸಹ ಆಗಿದೆ. ಈ ರಂಜಾನ್ ತಿಂಗಳಲ್ಲಿ ತರಾವಿ ನಮಾಜ್, ಉಪವಾಸ ಮತ್ತು ಝಕಾತ್ (ದಾನ)ಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ.

ನಮಾಜ್ ಎಂದರೆ ಪ್ರಾರ್ಥನೆ ಎಂಬ ಅರ್ಥ. ಇದನ್ನು ಇಸ್ಲಾಂ ಧರ್ಮದ ಮತ ಬಾಂಧವರೆಲ್ಲ ಪುರುಷ ಹಾಗೂ ಸ್ತ್ರೀಯರು ಎಂಬ ಭೇದ-ಭಾವ ಇಲ್ಲದೆ ಎಲ್ಲರೂ ಕಡ್ಡಾಯವಾಗಿ ನಿರ್ವಹಿಸಬೇಕು. ಪುರುಷರು ಮಸೀದಿಗಳಲ್ಲಿ ಸಂಘಟಿತರಾಗಿ ನೆರವೇರಿಸಬೇಕು ಎಂಬುದೇ ಇಸ್ಲಾಂ ವಿಧಿ. ಮಹಿಳೆಯರು ಮನೆಗಳಲ್ಲಿ ಪ್ರಾರ್ಥಿಸುವರು.

ದಿನಕ್ಕೆ ಐದು ಬಾರಿ ಕೇಳಿ ಬರುವ ಅಜಾನ್ ಅಥವಾ ಬಾಂಗ್ ಎಂದರೆ ನಮಾಜ್‍ಗೆ ಸಮಯವಾಗಿದೆ. ಮಸೀದಿಗೆ ಬನ್ನಿ ಅಥವಾ ಪ್ರಾರ್ಥನೆಗೆ ಸಿದ್ಧರಾಗಿ ಎಂಬ ಸೂಚನೆ. ದಿನಕ್ಕೆ ಐದು ಬಾರಿ ನಮಾಜ್ ಕಡ್ಡಾಯವಾಗಿ ಮಾಡಬೇಕು. ಅದರಲ್ಲೂ ರಂಜಾನ್ ತಿಂಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕು. ರಂಜಾನ್ ಸಮಯದಲ್ಲಿ ಪವಿತ್ರ ಗ್ರಂಥ ಖುರಾನ್‍ಅನ್ನು ಪ್ರತಿ ದಿನ ಪಠಣ ಮಾಡಬೇಕು ಎಂಬ ನಿಯಮ ಇದೆ.

ಝಕಾತ್ (ದಾನ) ಇಸ್ಲಾಂನಲ್ಲಿ ದಾನಕ್ಕೆ ಝಕಾತ್ ಎನ್ನುವರು. ನಮಾಜ್ ನಂತರದ ಸ್ಥಾನ ದಾನಕ್ಕೆ ಕೊಡಲಾಗಿದೆ. ಇದು ಇಸ್ಲಾಂನ ಅತಿ ಪ್ರಮುಖ ಆಧಾರ ಸ್ತಂಭವಾಗಿದೆ. ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮನೂ ತನ್ನ ಸ್ವತ್ತು, ಸಂಪತ್ತುಗಳ ಶೇಕಡ ಎರಡೂವರೆಯಷ್ಟನ್ನು ಪ್ರತಿ ವರ್ಷ, ಬಡ ಬಗ್ಗರಿಗೆ, ದೀನ ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ, ಧರ್ಮ ಸ್ಥಾಪನೆಯ ಕೇಂದ್ರಗಳಿಗೆ ಕಡ್ಡಾಯವಾಗಿ ದಾನ ನೀಡಲೇಬೇಕು.

ಉತ್ತಮ ಸ್ಥಿತಿಯಿರುವ ಮುಸ್ಲಿಮರು ನಗದು, ವ್ಯಾಪಾರ, ಸರಕು, ಬೆಳ್ಳಿ, ಬಂಗಾರ ಇತ್ಯಾದಿಗಳನ್ನು 40ನೆ ಒಂದಂಶವನ್ನು, ಕೃತಕ ನೀರಾವರಿಯ ಕೃಷಿಕನಾದರೆ ಉತ್ಪನ್ನಗಳ ಇಪ್ಪತ್ತನೆ ಒಂದಂಶವನ್ನು ದಾನ ನೀಡಬೇಕು ಎಂಬ ನಿಯಮ ಇದೆ.

ದಾನ ಕೊಡುವಾಗ ಹೆಮ್ಮೆಯ ಬದಲು ವಿನೀತ ಭಾವವಿರಬೇಕು. ಇದು ಇಲ್ಲದೆ ಇದ್ದರೆ ಅದು ಅಹಂಗೆ ಕಾರಣವಾಗುತ್ತದೆ. ನಾವು ಏಕಮನಸ್ಸಿನಿಂದ ದಾನ ಮಾಡಿದರೆ ಆ ಹಣವು ಸುತ್ತಾಡುತ್ತಾ ಬೇರೆ ರೀತಿಯಲ್ಲಿ ನಮ್ಮಲ್ಲಿಗೆ ಬಂದು ಸೇರುತ್ತದೆ. ನಾವು ಸಂಕುಚಿತ ಭಾವದಿಂದ ಅದನ್ನು ನಮ್ಮಲ್ಲೇ ಕೂಡಿ ಹಾಕಿಟ್ಟರೆ ಅಥವಾ ನಮ್ಮ ಸ್ವಂತ ಲಾಭಕ್ಕೆ ಮಾತ್ರ ಖರ್ಚು ಮಾಡಿದರೆ ಅದು ಕ್ರಮೇಣ ಕ್ಷಯಿಸುತ್ತ ಬರುವುದು. (ಒಂದು ಕೈಯಲ್ಲಿ ಕೊಟ್ಟರೆ ಇನ್ನೊಂದು ಕೈಗೆ ಮತ್ತೆ ಬರುವುದು).

ಮದ್ಯಪಾನ ಸೇವಿಸುವವರಿಗೆ, ಗಾಂಜಾ ಸೇವನೆ ಮಾಡುವವರಿಗೆ, ಜೂಜುಕೋರರಿಗೆ ಎಂದಿಗೂ ದಾನ ಕೊಡಬಾರದು. ದಾನಕ್ಕಾಗಿ ಬಡವರು ತಮ್ಮ ಮನೆಗೆ ಬರುವುದು ಇಸ್ಲಾಂ ಧರ್ಮದಲ್ಲಿಲ್ಲ. ದಾನಿಗಳೇ ಅವರ ಮನೆಗೆ ಹೋಗಿ ದಾನ ನೀಡಬೇಕು ಎಂಬ ನಿಯಮ ಇದೆ. ಏಕೆಂದರೆ, ಭಿಕ್ಷಾಟನೆಯನ್ನು ಇಸ್ಲಾಂ ಬಹಳವಾಗಿ ಖಂಡಿಸಿದೆ. ಕೊಡುವ ಕೈ ಪಡೆಯುವವನ ಕೈಗಿಂತ ಉತ್ತಮವಾದುದೆಂದು ಪ್ರವಾದಿಗಳು ಹೇಳಿರುವರು.

ಉಪವಾಸ ಉಪ ಎಂದರೆ ಸಮೀಪ, ವಾಸ ಎಂದರೆ ಇರುವುದು. ಅಂದರೆ ಭಗವಂತನ ಹತ್ತಿರ ಇರುವುದಕ್ಕೆ ಉಪವಾಸ ಎನ್ನುವರು. ರಂಜಾನ್‍ನ ಸಮಯದಲ್ಲಿ ಈ ಉಪವಾಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ. ರಂಜಾನ್‍ನಲ್ಲಿ ಒಂದು ತಿಂಗಳ ಕಾಲ ಈ ಉಪವಾಸ ವ್ರತ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಮಸೀದಿಯಿಂದ ಆಜ್ಞೆ ಆದ ಕೂಡಲೇ ಅನ್ನ, ಪಾನೀಯವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಉಪವಾಸದ ಸಮಯದಲ್ಲಿ ಉಗುಳನ್ನು ಸಹ ಸೇವಿಸಬಾರದು ಎಂಬ ನಿಯಮ ಇದೆ.

ಸಂಜೆ ಇಫ್ತಾರ್ (ಉಪವಾಸ ಬಿಡುವುದು) ಕೊಟ್ಟ ಮೇಲೆ ನೀರು ಮತ್ತು ಖರ್ಜೂರ ಸೇವಿಸಿ ನಮಾಜ್‍ಗೆ ಹೋಗಬೇಕು. ಉಪವಾಸದ ಸಮಯದಲ್ಲಿ ಜಗಳ ಗಲಾಟೆಯಿಂದ ದೂರ ಇರಬೇಕು. ಉಪವಾಸ ಮಾಡುತ್ತಿರುವ ವ್ಯಕ್ತಿಗೆ ಯಾರಾದರೂ ಬೈದರೆ ಅಥವಾ ಹೊಡೆಯಲಿಕ್ಕೆ ಬಂದರೆ ನಾನು ಉಪವಾಸ ವ್ರತದಲ್ಲಿರುವೆನು ಎಂದು ಹೇಳಬೇಕು.

ಉಪವಾಸದಲ್ಲಿ ಇಂದ್ರಿಯ ನಿಗ್ರಹವೇ ಮುಖ್ಯ. ಈ ವ್ರತದಿಂದ ಹಸಿವು, ಬಾಯಾ ರಿಕೆ, ಕಷ್ಟಗಳನ್ನು ಅನುಭವಿಸುವ ಮೂಲಕ ಬಡವರ ಸಂಕಷ್ಟಗಳ ನೋವು ತಿಳಿಯುತ್ತದೆ ಹಾಗೂ ಪ್ರತಿಯೊಬ್ಬ ಶ್ರೀಮಂತನಿಗೂ ಇದರ ಒಳ ಅರ್ಥ ತಿಳಿಯಬೇಕು ಎಂಬುದು ಮುಖ್ಯ ಉದ್ದೇಶ.

-ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

Facebook Comments