ಮುನಿಸಿಕೊಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಮುನಿಸಿಕೊಂಡು ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಎಐಸಿಸಿ ಸಮಿತಿಯನ್ನು ಪುನರ್ ರಚಿಸಲಾಗಿದೆ. ಅಲ್ಲಿ ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ದಿನೇಶ್‍ಗುಂಡೂರಾವ್, ಕೃಷ್ಣಬೈರೇಗೌಡ ಅವರಿಗೆ ಒಂದಲ್ಲಾ ಒಂದು ಸ್ಥಾನಮಾನವನ್ನು ಹೈಕಮಾಂಡ್ ನೀಡಿದೆ.

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದನಂತರ ಹಿರಿಯ ನಾಯಕರನ್ನು ಗುರುತಿಸಿ ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಮಾಡುತ್ತಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತೇಜನ ನೀಡಲಾಗುತ್ತಿದೆ.

ರಾಮಲಿಂಗರೆಡ್ಡಿ ಅವರು ಬೆಂಗಳೂರಿನ ಕಾಂಗ್ರೆಸ್ ಮಟ್ಟಿಗೆ ಸದಾ ಕಾಲ ಅನಭಿಶಕ್ತ ನಾಯಕ. ಆದರೆ, ಇತ್ತೀಚಿನ ದಿನಗಳಲ್ಲಿ ಉದ್ದೇಶ ಪೂರ್ವಕವಾಗಿ ಅವರನ್ನು ನಿರ್ಲಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ.

ನಿನ್ನೆ ಬೆಂಗಳೂರಿನಲ್ಲೇ ಇದ್ದರೂ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿಲ್ಲ. 31 ವರ್ಷಗಳ ಕಾಲ ಸುದೀರ್ಘವಾಗಿ ಎಂಎಲ್‍ಎ ಆಗಿರುವ ರಾಮಲಿಂಗಾರೆಡ್ಡಿ ಅವರು, ಶಾಸಕಾಂಗ ಸಭೆಯಲ್ಲಿ ಹೇಗೆ ಮಾತನಾಡಬೇಕು, ಏನು ಮಾತನಾಡಬೇಕು ಎಂಬುದರ ಬಗ್ಗೆ ಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ. ಪಕ್ಷಕ್ಕೆ ನಾನು ಹೊಸದಾಗಿ ಬಂದಿಲ್ಲ.

ಕಾಂಗ್ರೆಸ್ ಸಿದ್ಧಾಂತಗಳು ಏನು ? ನಿಲುವುಗಳು ಏನು ಎಂಬುದು ಗೊತ್ತಿದೆ. ಪಕ್ಷದ ಪರವಾಗಿ ಅಧಿವೇಶನದಲ್ಲಿ ಮಾತನಾಡುವ ಎಲ್ಲಾ ಸಾಮಥ್ರ್ಯಗಳು ನನಗಿವೆ ಎಂದು ಹೇಳುವ ಮೂಲಕ ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಅವರ ನಿರಾಸಕ್ತಿ ಬೆಂಗಳೂರಿನ ಕಾಂಗ್ರೆಸ್‍ಗೆ ದೊಡ್ಡ ಪೆಟ್ಟು ನೀಡಿದೆ. ಬೆಂಗಳೂರು ಜಿಲ್ಲಾ ಕಾಂಗ್ರೆಸ್‍ನ ಚಟುವಟಿಕೆ ಮತ್ತು ಸಿಬ್ಬಂದಿಗಳಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತಿರುವ ರಾಮಲಿಂಗಾರೆಡ್ಡಿ ಅವರ ಮುನಿಸು ಕಾಂಗ್ರೆಸನ್ನು ಗಲಿಬಿಲಿಗೊಳಿಸಿದೆ.

ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ. ಕ್ಷೇತ್ರ ವಿಂಗಡಣೆ, ಮೀಸಲಾತಿ ನಿಗದಿಯಲ್ಲೂ ಬಿಜೆಪಿ ಸರ್ಕಾರ ತಂತ್ರಗಾರಿಕೆ ರೂಪಿಸುತ್ತಿದ್ದು, ಕಾಂಗ್ರೆಸ್‍ನ ಘಟಾನುಘಟಿಗಳನ್ನು ಮನೆಗೆ ಕಳುಹಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಈ ವೇಳೆ ರಾಮಲಿಂಗಾರೆಡ್ಡಿ ಅವರ ರಾಜಕೀಯ ನಿರಾಸಕ್ತಿ ಬಿಬಿಎಂಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಕಂಗಾಲಾಗುವಂತೆ ಮಾಡಿದೆ.

Facebook Comments