ಜನರನ್ನು ಸುಲಿಗೆ ಮಾಡುತ್ತಿದೆ ಬಿಜೆಪಿ ಸರ್ಕಾರ : ರಾಮಲಿಂಗಾರೆಡ್ಡಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.4- ಜನಸಾಮಾನ್ಯರು 20/30 ಜಾಗದಲ್ಲಿ ಮನೆಕಟ್ಟಿಕೊಳ್ಳಲು ನಕ್ಷೆ ಮಂಜೂರು ಮಾಡಿಸಿಕೊಳ್ಳಬೇಕಾದರೆ 2 ಲಕ್ಷ ರೂ. ನೀಡಬೇಕಾದ ಅನಿವಾರ್ಯತೆ ಇದೆ. ಬಿಬಿಎಂಪಿ ಎಲ್ಲಾ ತೆರಿಗೆಗಳನ್ನು ಹೆಚ್ಚು ಮಾಡಿ ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಬಿಬಿಎಂಪಿ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿಯ 11 ಆಸ್ತಿಗಳನ್ನು ಅಡಮಾನೆ ಮಾಡಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ತೀರಿಸಿ ಆಸ್ತಿಗಳನ್ನು ಬಿಡಿಸಿಕೊಂಡಿದ್ದೇವೆ ಎಂದರು. ಬಿಜೆಪಿ ಅಧಿಕಾರಾವಧಿಯಲ್ಲಿ ಕಸ ನಿರ್ವಹಣೆ ಸರಿಯಾಗಿ ನಡೆದಿಲ್ಲ. ಮೆಟ್ರೊ ನಗರ, ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರಿಗೆ ಗಾರ್ಬೆಜ್ ನಗರ ಎಂದು ಕೆಟ್ಟ ಹೆಸರು ತಂದುಕೊಟ್ಟರು. ಗುತ್ತಿಗೆದಾರರಿಗೆ 3ಸಾವಿರ ಕೋಟಿ ರೂ.ಗಳ ಬಾಕಿ ಕೊಡಬೇಕಿದೆ. ಹಣ ಕೊಡದೇ ಇದ್ದರೆ ಯಾರು ತಾನೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಸ್ಯಾಂಕ್ಷನ್ ಮಾಡಿಸಿಕೊಳ್ಳುವ ಶುಲ್ಕವನ್ನು ಹೆಚ್ಚಳ ಮಾಡಿದ್ದಾರೆ. 20/30 ಅಡಿ ಅಳತೆಯ ನಿವೇಶನದಲ್ಲಿ ಮನೆ ಕಟ್ಟಲು ನಕ್ಷೆ ಮಂಜೂರು ಮಾಡಿಕೊಳ್ಳಬೇಕಾದರೆ 2 ಲಕ್ಷ ರೂ. ಕೊಡಬೇಕು. ಹೀಗಾದರೆ ಬಡವರು ಮನೆ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಡವರಿಗೆ ಬಿಸಿಯೂಟ ನೀಡುವ ಸಲುವಾಗಿ ನಮ್ಮ ಸರ್ಕಾರ ಇಂದಿರಾ ಕ್ಯಾಂಟಿನ್ ಸ್ಥಾಪಿಸಿತು. ಅದರಲ್ಲಿ ಇಂದಿರಾಗಾಂಧಿ ಅವರ ಹೆಸರಿದೆ ಎಂಬ ಕಾರಣಕ್ಕಾಗಿ ಯೋಜನೆಯನ್ನೇ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಯಾವ ರಸ್ತೆಗಳೂ ನೆಟ್ಟಗಿಲ್ಲ. ಎಲ್ಲಾ ಕಡೆ ಗುಂಡಿಗಳು ಕಾಣುತ್ತಿವೆ. ಬಿಬಿಎಂಪಿಯಲ್ಲಿ ಜನಸಮಾನ್ಯರಿಗೆ ಸೌಲಭ್ಯಗಳೇ ಸಿಗುತ್ತಿಲ್ಲ. ಬೆಂಗಳೂರಿನ ಬೀದಿ ದೀಪಗಳ ನಿರ್ವಹಣೆಯನ್ನು ಒಬ್ಬ ಗುತ್ತಿಗೆದಾರನಿಗೆ ವಹಿಸಲಾಗಿದೆ. ಆದರೆ, ಕೆಲಸವೇ ಇನ್ನೂ ಆರಂಭಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ರಿಜ್ವಾನ್ ಅರ್ಷದ್, ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್‍ಗೌಡ, ಮಾಜಿ ಮೇಯರ್ ಮಂಜುನಾಥ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ವೇಳೆ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

Facebook Comments