ಚುನಾವಣೆ ಸಂದರ್ಭದಲ್ಲಿ ಮಾತ್ರ ಹೊರ ಬರುವ ಪ್ರಧಾನಿ : ರಾಮಲಿಂಗಾರೆಡ್ಡಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.15- ಪ್ರಧಾನಿ ನರೇಂದ್ರ ಮೋದಿ ಅವರು ಜನರು ಕಷ್ಟದಲ್ಲಿದ್ದಾಗ ಮನೆ ಬಿಟ್ಟು ಹೊರ ಬರದೆ ಒಳಗೆ ಇರುತ್ತಾರೆ. ಚುನಾವಣೆ ಬರುತ್ತಿದ್ದಂತೆ ಪ್ರಚಾರಕ್ಕಾಗಿ ಬಹಿರಂಗವಾಗಿ ಹೊರಗೆ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಬೆಲೆ ಏರಿಕೆ ವಿರೋಧಿಸಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ಟ್ಯಾನರಿ ರಸ್ತೆಯಲ್ಲಿ ಕಾಂಗ್ರೆಸ್‍ನಿಂದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಆರು ತಿಂಗಳು ಮನೆ ಬಿಟ್ಟು ಹೊರಗೆ ಬರಲಿಲ್ಲ.

ಕಾಂಗ್ರೆಸಿಗರು ಜನರ ನಡುವೆ ಇದ್ದು ನೆರವು ನೀಡಿದ್ದೆವು. ರಾಜ್ಯದಲ್ಲಿ ಪ್ರವಾಹ ಬಂದಾಗಲೂ ಪ್ರಧಾನಿ ಬಂದು ನೋಡಲಿಲ್ಲ. ಈಗ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡಿದ್ದಾರೆ. ಚುನಾವಣೆ ಬಂದರೆ ಮಾತ್ರ ಮೋದಿ ಆಚೆ ಬರುತ್ತಾರೆ ಎಂದು ಅವರು ಲೇವಡಿ ಮಾಡಿದರು. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ಪ್ರಧಾನಿ ಮುಂದೆ ನಿಂತು ಮಾತನಾಡುವ, ರಾಜ್ಯದ ಸಮಸ್ಯೆಗಳನ್ನು ಹೇಳುವ, ಕರ್ನಾಟಕಕ್ಕೆ ಹೆಚ್ಚಿನ ನೆರವು ತರುವ ಧೈರ್ಯವಿಲ್ಲ. ಜನರ ಕಷ್ಟಗಳನ್ನು ಕೇಳುವವರಿಲ್ಲ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆ ಪ್ರಕರಣದಲ್ಲಿ ನಾವು ಅಖಂಡ ಶ್ರೀನಿವಾಸಮೂರ್ತಿ ಪರವಾಗಿದ್ದೇವೆ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ಜತೆ ಮಾತನಾಡುತ್ತೇನೆ. ತಪ್ಪು ಮಾಡಿದ್ದರೆ ಸಂತಪ್‍ರಾಜ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

Facebook Comments