ಶ್ರಮಿಕರ ಖಾತೆಗೆ 10 ಸಾವಿರ ಆರ್ಥಿಕ ನೆರವು ನೀಡಿ: ಸಿಎಂಗೆ ರಾಮಲಿಂಗಾರೆಡ್ಡಿ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.23- ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿಗೊಳಿಸಿರುವುದರಿಂದ ಬಡವರು , ಶ್ರಮಿಕರು , ಮಧ್ಯಮವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಅವರ ಖಾತೆಗೆ ರಾಜ್ಯ ಸರ್ಕಾರ ತಲಾ 10 ಸಾವಿರ ರೂಪಾಯಿ ತುರ್ತಾಗಿ ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೂರು ಪುಟಗಳ ಪತ್ರ ಬರೆದಿರುವ ರಾಮಲಿಂಗಾರೆಡ್ಡಿ ಅವರು, ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಮೊದಲು ಸಂಕಷ್ಟಕ್ಕೆ ಸಿಲುಕುವುದು ಶ್ರಮಿಕವರ್ಗ. ಅಂಥವರಿಗೆ ಕನಿಷ್ಠ 15 ಕೆಜಿ ಆಹಾರ ಧಾನ್ಯವನ್ನು ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಯವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

ಬೀದಿಬದಿ ವ್ಯಾಪಾರಿಗಳು ಆಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ ಗಾರ್ಮೆಂಟ್ಸ್ ನೌಕರರು, ಹೋಟೆಲ್, ಕಟ್ಟಡ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇವರಿಗೆ ಕನಿಷ್ಠ ತಿಂಗಳ ಮಟ್ಟಿಗಾದರೂ ಆಹಾರಧಾನ್ಯಗಳನ್ನು ವಿತರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಮಧ್ಯಮ ವರ್ಗದವರಿಗೆ ದಿನನಿತ್ಯದ ಬದುಕು ಕಟ್ಟಿಕೊಡು ವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ ಹಣ್ಣು, ತರಕಾರಿ, ಬೆಳೆಗಾರರು ಸೇರಿದಂತೆ ಅಗತ್ಯ ಇರುವವರಿಗೆ ಸಾಮಗ್ರಿ ಗಳನ್ನು ಒದಗಿಸುವಂತೆ ಒತ್ತಾಯ ಮಾಡಿದ್ದಾರೆ.

ಕೊರೊನಾ ಮತ್ತು ಹಸಿವು ಯಾರನ್ನು ಕಾಯುವುದಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಆಕ್ಸಿಜನ್ ಇಲ್ಲದೆ, ತಿನ್ನಲು ಅನ್ನವಿಲ್ಲದೆ ರೋಗಿಗಳು ಪರದಾಡುತ್ತಿರುವ ದೃಶ್ಯಗಳು ಎಂಥವರ ಕರುಳು ಹಿಂಡುವಂತೆ ಮಾಡಿದೆ. ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲದೆ ರಸ್ತೆಗಳಲ್ಲಿ ಬಿದ್ದು ಒದ್ದಾಡುತ್ತಿರುವ ರೋಗಿಗಳಿಗೆ ಸರ್ಕಾರ ಕನಿಷ್ಠ ಚಿಕಿತ್ಸೆಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದೆ. ಇದು ಯಾವುದೇ ಒಂದು ಚುನಾಯಿತ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ರಾಮಲಿಂಗರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 2ನೇ ಕೋವಿಡ್ ಅಲೆ ಬರಬಹುದೆಂದು ತಜ್ಞರು ಸೂಚನೆ ಕೊಟ್ಟಿದ್ದರೂ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆರೋಗ್ಯ ಸಚಿವರು ಕೂಡ ಸಭೆ ನಡೆಸಿ ಕೋವಿಡ್ ಸೋಂಕು ಹಬ್ಬದಂತೆ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂಬುದರ ಬಗ್ಗೆ ಸಭೆಗಳನ್ನು ಮಾಡಿಲಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದ್ದಾರೆ.

ಆಕ್ಸಿಜನ್ ಡೀಲರ್‍ಗಳ ಸಂಖ್ಯೆ, ಆಕ್ಸಿಜನ್ ಕಂಟ್ರೋಲ್ ನಂಬರ್‍ನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಇದು ಕಾಗದದ ಮೇಲೆ ಮಾತ್ರ ಉಳದಿದೆ. ಈ ದೂರವಾಣಿಗೆ ಕರೆ ಮಾಡಿದರೆ ಆಕ್ಸಿಜನ್ ಇಲ್ಲ ಎಂಬ ಉತ್ತರ ಬರುತ್ತದೆ. ಹೀಗಾಗಿ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಳಸಂತೆಯಲ್ಲಿ ಔಷ ಮಾರಾಟ ಮಾಡುತ್ತಿದ್ದಾರೆ. ತಕ್ಷಣವೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಎಲ್ಲಿ ಮಾರಾಟ ಮಾಡುತ್ತಿದ್ದಾರೋ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಚಿವರ ಬಣ್ಣ ಬಣ್ಣದ ಮಾತುಗಳಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ತಳಮಟ್ಟದಿಂದ ಹೋರಾಟ ಮಾಡಿ ನಾಯಕರಾಗಿ ನಡೆದು ಮುಖ್ಯಮಂತ್ರಿಯಾಗಿದ್ದೀರಿ. ಈಗಲಾದರೂ ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

Facebook Comments