‘ಕಷ್ಟ ಸಮಯದಲ್ಲಿ ಪರಿಹಾರ ಕೊಡದಿದ್ದರೆ ಮತ್ತಿನ್ಯಾವಾಗ ಕೊಡ್ತಾರೆ..?: ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ,ಆ.24- ನೆರೆಯಿಂದ ಜನ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಪರಿಹಾರ ನೀಡದೆ ಮತ್ತಿನ್ಯಾವಾಗ ನೀಡುತ್ತದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಜಿಲ್ಲೆಯ ಚಿಕ್ಕಸಂಶಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಸ್ಥಿತಿಗೆ ಸ್ಪಂದಿಸಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಪರಿಸ್ಥಿತಿ ಅಧ್ಯಯನ ಮಾಡಿ ಒಂದು ವೇಳೆ ಹೆಚ್ಚಿನ ಪರಿಹಾರ ಕೊಟ್ಟಿದ್ದರೆ ಅವರು ಬರಲಿಲ್ಲ ಎಂಬ ಆಕ್ಷೇಪ ಬರುತ್ತಿರಲಿಲ್ಲ.

ವಿತ್ತ ಸಚಿವೆ ನಿರ್ಮಲಾಸೀತಾರಾಮನ್, ಗೃಹ ಸಚಿವ ಅಮಿತ್‍ಶಾ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಆದರೆ, ಕೇಂದ್ರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇರಳಕ್ಕೆ ಬಂದು ಸಮೀಕ್ಷೆ ಮಾಡಿ ಅನುದಾನ ನೀಡಿದ ಮೋದಿ ಅವರಿಗೆ ಕರ್ನಾಟಕಕ್ಕೆ ಬರಲು ಏಕೆ ಸಾಧ್ಯವಾಗಲಿಲ್ಲ. 25 ಮಂದಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ರಾಜ್ಯಕ್ಕೆ ನೆರವು ಸಿಗಲಿಲ್ಲ ಎಂದರೆ ಇದನ್ನು ಯಾವ ರೀತಿ ವಿಶ್ಲೇಷಿಸಬೇಕು ? ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆಯೇ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮತ್ತು ದೇವೇಗೌಡರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ ಅವರಿಬ್ಬರ ನಡುವೆ ಮಾತುಕತೆಗಳು ನಡೆಯುತ್ತಿರುತ್ತವೆ. ಸಮ್ಮಿಶ್ರ ಸರ್ಕಾರ ಪತನಗೋಳ್ಳಲು ಬೇರೆ ಬೇರೆ ಕಾರಣಗಳಿವೆ. ಸಮಯ ಸಿಕ್ಕಾಗಾಲೆಲ್ಲಾ ಅವುಗಳನ್ನು ಹೇಳುತ್ತಾ ಬಂದಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸಿಗರ್ಯಾರೂ ನಿರಾಶ್ರಿತರಾಗಿಲ್ಲ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಬಿಜೆಪಿ ಕೂಡ ಒಂದು ಕಾಲದಲ್ಲಿ ಸೋತಿತ್ತು. ಈಗ ಅಧಿಕಾರದಲ್ಲಿ ಇರಬಹುದು. ಮುಂದೆ ಅವರಿಗೂ ಸೋಲು ಕಟ್ಟಿಟ್ಟ ಬುತ್ತಿ. ಆಗ ಅವರೂ ನಿರಾಶ್ರಿತರಾಗಬಹುದು. ಸದ್ಯಕ್ಕೆ ಕಾಂಗ್ರೆಸಿಗರು ನಿರಾಶ್ರಿತರಲ್ಲ ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

Facebook Comments