ಸಿಎಂ ಯಡಿಯೂರಪ್ಪ ಭೇಟಿಯಾದ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.2-ನೂರು ದಿನ ಪೂರೈಸಿರುವ ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿದ್ದರೆ ಒಳ್ಳೆಯ ಹೆಸರು ಬರುವ ಸಾಧ್ಯತೆ ಇತ್ತು. ಅತಿವೃಷ್ಟಿ, ಅನಾವೃಷ್ಟಿ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ತೀವ್ರ ಬೇಸರ ಉಂಟು ಮಾಡಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು.

ಬಿಟಿಎಂ ಲೇಔಟ್‍ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದೆ. ಕೇಂದ್ರದ ಸಹಕಾರ ಸಿಕ್ಕಿದ್ದರೆ ಆಡಳಿತಕ್ಕೆ ಒಳ್ಳೆಯ ಹೆಸರು ಬರುವ ಸಾಧ್ಯತೆ ಇತ್ತು.

ಆದರೆ ಬರ, ಅತಿವೃಷ್ಟಿ ವಿಚಾರದಲ್ಲಿ ಕೇಂದ್ರ ತೀವ್ರ ನಿರ್ಲಕ್ಷ್ಯ ಮಾಡಿದ್ದರಿಂದ ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯಲ್ಲಿ ಯಾವುದೇ ಸರ್ಕಾರವಿದ್ದರೂ ಕೇಂದ್ರದ ನೆರವು ಅಗತ್ಯ. ಆದರೆ ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸರಿಯಾಗಿ ಸ್ಪಂದಿಸಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿರುವುದಕ್ಕೆ ರಾಜಕೀಯ ಕಾರಣ ಹುಡುಕುವುದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನೂರು ದಿನಗಳ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅಂಕಿಅಂಶಗಳನ್ನಿಟ್ಟುಕೊಂಡು ಹೇಳಿರಬಹುದು. ನಾನು ಕೇವಲ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಹೊರತುಪಡಿಸಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಹೇಳಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರ ಬಹಳ ದೊಡ್ಡದಿದ್ದು, ಬಿಬಿಎಂಪಿಯ 8 ವಾರ್ಡ್‍ಗಳನ್ನು ಹೊಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಹಣದ ಅವಶ್ಯಕತೆ ಇರುವುದರಿಂದ ಇಂದಿನ ಸರ್ಕಾರ 378 ಕೋಟಿ ರೂ. ಅನುದಾನ ನಿಗದಿ ಮಾಡಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಎಲ್ಲಾ ಅನುದಾನವನ್ನು ಪುನರ್ ವಿಮರ್ಶಿಸಿದ ಬಳಿಕ ಬಿಟಿಎಂ ವಿಧಾನಸಭಾ ಕ್ಷೇತ್ರಕ್ಕೆ 153 ಕೋಟಿ ರೂ. ಅನುದಾನದ ಮಾತ್ರ ನಿಗದಿಪಡಿಸಿದೆ.

ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಮನವಿ ಮಾಡಿದ್ದು, ಈಗ ಖುದ್ದು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

Facebook Comments