ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ 94 ಲಕ್ಷ ಆಹಾರ ಕಿಟ್‍ ಹಂಚಿಕೆ : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.6- ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 94 ಲಕ್ಷ ಆಹಾರದ ಪೊಟ್ಟಣಗಳನ್ನು , 13 ಲಕ್ಷ ಕೆಜಿ ತರಕಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಸ್ವಚ್ಛತಾ ಟಾಸ್ಕ್ ಪೋರ್ಸ್ ನಗರ ಘಟಕದ ಅಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರವಾರು ಹಂಚಿಕೆ ಮಾಡಲಾಗಿರುವ ಆಹಾರಧಾನ್ಯ, ವೈದ್ಯಕೀಯ ನೆರವಿನ ಬಗ್ಗೆ ವಿವರಣೆ ನೀಡಿದರು.

ಬೆಂಗಳೂರು 28 ವಿಧಾನಸಭಾ ಕ್ಷೇತ್ರಗಳಲ್ಲೂ 5.85 ಲಕ್ಷ ಮಾಸ್ಕ್‍ಗಳು, ಸ್ಯಾನಿಟೈಸರ್, ಪಿಪಿಇ ಕಿಟ್‍ಗಳನ್ನು ನೀಡಲಾಗಿದೆ., ಕಾರ್ಮಿಕರಿಗೆ ಜನಸಾಮಾನ್ಯರಿಗೆ 93,96,000 ಆಹಾರ ಪೊಟ್ಟಣಗಳನ್ನು, 10.14 ಲಕ್ಷ ಕುಟುಂಬಗಳಿಗೆ ಆಹಾರಧಾನ್ಯಗಳನ್ನು, ರೈತರಿಂದ ನೇರವಾಗಿ ಖರೀದಿಸಿ 13.12 ಲಕ್ಷ ಕೆಜಿ ತರಕಾರಿಯನ್ನು ಹಂಚಿಕೆ ಮಾಡಲಾಗಿದೆ. 11,648 ಮಂದಿಗೆ ಔಷಧಿಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಕೊರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ.ಕೇಂದ್ರ ಸರ್ಕಾರ ಆತುರಾತುರವಾಗಿ ಲಾಕ್‍ಡೌನ್ ಘೋಷಣೆ ಮಾಡಿತ್ತು. ಈ ಅವೈಜ್ಞಾನಿಕವಾಗಿ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. ಈಗ ಸೋಂಕು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಕನಿಷ್ಠ ಇನ್ನು ಕೆಲವು ತಿಂಗಳ ಕಾಲ ಶಾಲಾಕಾಲೇಜುಗಳನ್ನು ತೆರೆಯಬಾರದು ಎಂದ ಅವರು, ರಾಜ್ಯ ಸರ್ಕಾರ ಲಾಕ್‍ಡೌನ್ ಸಂದರ್ಭದಲ್ಲಿ ಆಹಾರದ ಕಿಟ್‍ಗಳನ್ನು ಹಂಚಿಕೆ ಮಾಡುವ ವಿಷಯದಲ್ಲೂ ತಾರತಮ್ಯ ಮಾಡಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ 3.90 ಲಕ್ಷ, ಕಾರ್ಮಿಕ ಇಲಾಖೆಯಿಂದ 3.14 ಲಕ್ಷ ಫುಡ್‍ಕಿಟ್‍ಗಳು ಹಂಚಿಕೆಯಾಗಿದೆ.

ಅದರಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಕೇವಲ 50 ಸಾವಿರ ಮಾತ್ರ ಕೊಟ್ಟಿದ್ದಾರೆ. ಸಾಕಷ್ಟು ತಾರತಮ್ಯ ಆಗಿದೆ. ಆಹಾರದ ಪೊಟ್ಟಣಗಳು ಕಾರ್ಮಿಕರಿಗೆ ಸರಿಯಾಗಿ ತಲುಪಿಲ್ಲ. ಕಾಂಗ್ರೆಸ್ ಪಕ್ಷ ಸರ್ಕಾರಕ್ಕಿಂತಲೂ ಹೆಚ್ಚಿನದಾಗಿ ಆಹಾರ, ಧವಸದಾನ್ಯಗಳನ್ನು ಜನರಿಗೆ ನೀಡಿ ಕಷ್ಟಕಾಲದಲ್ಲಿ ನೆರವಾಗಿದೆ ಎಂದು ವಿವರಿಸಿದರು.  ರಾಜ್ಯಸಭೆಗೆ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಖರ್ಗೆ, ದೇವೇಗೌಡರಂತಹ ಮುತ್ಸದಿಗಳು ಸಂಪುಟದಲ್ಲಿ ಇರಬೇಕು. ಕಾಂಗ್ರೆಸ್‍ನ ಹೆಚ್ಚುವರಿ ಮತಗಳನ್ನು ಏನು ಮಾಡಬೇಕೆಂದು ಹೈಕಮಾಂಡ್ ತಿಳಿಸಲಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಇ.ಶೇಖರ್, ಎಂ.ರಾಜ್‍ಕುಮಾರ್, ಕೃಷ್ಣಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ, ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ, ಮುಖಂಡರಾದ ಮನೋಹರ್ ಇತರರು ಇದ್ದರು.

Facebook Comments