ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ಮಾಜಿ ಗೃಹ ಸಚಿವರು ಮತ್ತು ಪ್ರಭಾವಿ ಶಾಸಕರಾದ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕೆಪಿಸಿಸಿ ಕಚೇರಿ ಮುಂದೆ ಬಿಬಿಎಂಪಿ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಮೇಯರ್ ಮಂಜುನಾಥರೆಡ್ಡಿ, ಪಾಲಿಕೆ ಸದಸ್ಯರಾದ ಜಿ.ಮಂಜುನಾಥ್, ಟಿ.ರಾಮಚಂದ್ರ, ಚಂದ್ರಪ್ಪ, ಬಿಬಿಎಂಪಿ ಮಾಜಿ ಸದಸ್ಯರಾದ ಮುನಿಸಂಜೀವಯ್ಯ, ಜಿ.ಎನ್. ಆರ್.ಬಾಬು ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಂಜುನಾಥರೆಡ್ಡಿ ಮಾತನಾಡಿ, ರಾಮಲಿಂಗಾರೆಡ್ಡಿಯವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ನಗರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಪಕ್ಷ ಸಂಘಟನೆಯಲ್ಲಿ ಮಹತ್ವ ಪೂರ್ಣ ಪಾತ್ರ ವಹಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸರಳ-ಸಜ್ಜನ ರಾಜಕಾರಣಿ ಎಂದೇ ಅವರು ಚಿರಪರಿಚಿತರಾಗಿದ್ದಾರೆ ಎಂದು ಹೇಳಿದರು.

ಪಕ್ಷ ನಿಷ್ಠೆ, ಸಿದ್ಧಾಂತಗಳನ್ನು ನಂಬಿರುವ ಮುಖಂಡರನ್ನು ಕಾಂಗ್ರೆಸ್‍ನ ಹಿರಿಯ ನಾಯಕರು ಗಮನಿಸಬೇಕು. ನಮ್ಮ ಪಕ್ಷದ ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

Facebook Comments