ರಾಮನಗರದಲ್ಲಿ ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಜೂ.5- ರಾಮನಗರ ಜಿಲ್ಲೆಯಲ್ಲಿ ಮತ್ತೆರಡು ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ರಾಮನಗ ರದ ಕುಂಬಾರ ಬೀದಿಯ 57 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ (ಪಿ-3313) ಜೂ.1ರಂದು ಕೊರೊನಾ ಇರುವುದು ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಇಂದು ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನೊಂದು ಪ್ರಕರಣದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಶ್ಯಾನಬೋಗನಹಳ್ಳಿಯ 27 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇವರನ್ನು ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದೆ. ಕಳೆದ ಮೇ 25ರಂದು ಚೆನ್ನೈನಿಂದ ಹಿಂದಿರುಗಿದ್ದ ಎರಡು ವರ್ಷದ ಬಾಲಕನಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.

ಜೂ.1ರಂದು ಮತ್ತೊಂದು ಕೋವಿಡ್ ಪ್ರಕರಣ ರಾಮನಗರದಲ್ಲಿ ದೃಢಪಟ್ಟಿತ್ತು. ಇಂದು ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ತಲಾ ಒಂದೊಂದು ಪ್ರಕರಣ ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 4573 (ಹೊಸದಾಗಿ ಇಂದಿನ 98 ಸೇರಿ). 28 ದಿನಗಳ ನಿಗಾ ಅವಧಿ ಪೂರೈಸಿದವರು 1551 ಜನರಿದ್ದಾರೆ. 14 ದಿನಗಳ ನಿಗಾ ಅವಧಿ ಪೂರೈಸಿದವರು 1427 ಜನರಾಗಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ 1345 ಜನರಾಗಿದ್ದಾರೆ. (ಹೊಸದಾಗಿ ಇಂದಿನ 92 ಜನ).

ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 22 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 1759 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ. ಒಟ್ಟು 13 ಜನ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟಿಟ್ಯೂಷನಲ್ ಕ್ವಾರಂಟೈನ್‍ಗೆ ಒಟ್ಟಾರೆ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ.

ಇಂದು ಹೊಸದಾಗಿ 98 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 4671 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಒಟ್ಟು 4246 ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿದೆ. ಇಂದಿನ 98 ಬಾಕಿ ವರದಿ ಸೇರಿ ಒಟ್ಟು 421 ಪ್ರಕರಣಗಳ ವರದಿ ನಿರೀಕ್ಷಿಸಲಾಗಿದೆ.

Facebook Comments