ದಲಿತ ಮುಖಂಡನ ಕೊಲೆ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kanakapurಕನಕಪುರ, ನ.13- ದಲಿತ ಮುಖಂಡ ಆರ್.ಟಿ.ರಾಜಗೋಪಾಲ್ (42) ಕೊಲೆ ಖಂಡಿಸಿ ಜೆಡಿಎಸ್ ಮುಖಂಡರು, ದಲಿತ ಮುಖಂಡರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಲೂಕು ಆಡಳಿತ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ದಲಿತ ಮುಖಂಡರು, ಜೆಡಿಎಸ್ ಮುಖಂಡರು, ಸಾರ್ವಜನಿಕರು ಪಟ್ಟುಹಿಡಿದು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ನಿರಂತರವಾಗಿ ಸಾರ್ವಜನಿಕರ ಮೇಲೆ ಹಲ್ಲೆ, ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದು, ಸಮಾಜಘಾತುಕ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಕಳೆದ ಮೂರು ವರ್ಷಗಳಿಂದೀಚೆಗೆ ಹಾಡಹಗಲೇ 10 ಮಂದಿಯ ಕೊಲೆ ನಡೆದಿದೆ. ಗಾಂಜಾ, ಡ್ರಗ್ಸ್ ಮಾಫಿಯಾ ನಿರಂತರವಾಗಿ ನಡೆಯುತ್ತಲೇ ಇದೆ. ಪೊಲೀಸರು ಇವುಗಳನ್ನು ಮಟ್ಟ ಹಾಕುವ ಬದಲು ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ರಮೇಶ್ ಅವರ ಮುಂದೆ ಪ್ರತಿಭಟನಾನಿರತರು ದೂರಿನ ಸುರಿಮಳೆಗೈದರು.

ನಂತರ ಜಿಲ್ಲಾಧಿಕಾರಿ ರಾಜೇಂದ್ರನ್ ಹಾಗೂ ಎಸ್‍ಪಿ ರಮೇಶ್ ಅವರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ 24 ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು. ಕಾನೂನು ಸುವ್ಯವಸ್ಥೆ ಹದಗೆಡದ ರೀತಿ ರಕ್ಷಣೆ ನೀಡಲಾಗುವುದು ಎಂದು ಮನವೊಲಿಸಿದರು.ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ರವಿ, ಜೆಡಿಎಸ್ ಮುಖಂಡ ವಿಶ್ವನಾಥ್, ತಾಲೂಕು ಅಧ್ಯಕ್ಷ ನಾಗರಾಜ್, ಬಿಡಿಸಿಸಿ ಮಾಜಿ ಅಧ್ಯಕ್ಷ ನಾರಾಯಣ್‍ಗೌಡ, ಚಿನ್ನಸ್ವಾಮಿ ಸೇರಿದಂತೆ ಹಲವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಘಟನೆ ವಿವರ: ಜೆಡಿಎಸ್‍ನ ಎಸ್‍ಸಿ-ಎಸ್‍ಟಿ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಟಿ.ರಾಜಗೋಪಾಲ್ (42) ಎಂಬುವವರು ಪಟ್ಟಣದ ಹಳೆ ಪೊಲೀಸ್ ಠಾಣೆ ವ್ಯಾಪ್ತಿಯ ಟೀ ಅಂಗಡಿಯೊಂದರಲ್ಲಿ ನಿನ್ನೆ ಸಂಜೆ 7.20ರಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಇವರ ಮೊಬೈಲ್‍ಗೆ ಕರೆ ಬಂದಿದ್ದು, ತಕ್ಷಣ ಟೀ ಕುಡಿದು ಸಮೀಪದ ಜನನಿ ಕ್ಲಿನಿಕ್ ಬಳಿ ಬಂದು ಮಾತನಾಡುತ್ತಿದ್ದಾಗ ಏಕಾಏಕಿ ಬಂದ ಮೂವರು ದುಷ್ಕರ್ಮಿಗಳು ಲಾಂಗ್‍ನಿಂದ ಮನಬಂದಂತೆ ಹಲ್ಲೆ ನಡೆಸಿರುವುದಲ್ಲದೆ ಎದೆ ಭಾಗಕ್ಕೆ ಚಾಕುವಿನಿಂದ ಬಲವಾಗಿ ಚುಚ್ಚಿ ಪರಾರಿಯಾಗಿದ್ದಾರೆ. ಹಲ್ಲೆ ಹಾಗೂ ಇರಿತದಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲೇ ಬಿದ್ದು ರಾಜಗೋಪಾಲ್ ಕುಸಿದು ಮೃತಪಟ್ಟಿದ್ದಾರೆ. ನೋಡನೋಡುತ್ತಿದ್ದಂತೆ ದುಷ್ಕರ್ಮಿಗಳು ರಾಜಗೋಪಾಲ್‍ನನ್ನು ಕೊಲೆ ಮಾಡಿ ಕ್ಷಣಾರ್ಧದಲ್ಲೇ ತಲೆಮರೆಸಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‍ಪಿ ಮಲ್ಲೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಮಲ್ಲೇಶ್ ಭೇಟಿ ನೀಡಿದ್ದರು. ಆರ್.ಟಿ.ರಾಜಗೋಪಾಲ್ ಬಹುಜನ ಸಮಾಜ ಪಕ್ಷದ ಕಾರ್ಯಕರ್ತನಾಗಿ, ಮುಖಂಡನಾಗಿ ದಲಿತ ಸಂಘಟನೆಗಳ ಮೂಲಕ ರಾಜಕೀಯವಾಗಿ ತೊಡಗಿಸಿಕೊಂಡು ಕಳೆದ ಎರಡು ವರ್ಷಗಳ ಹಿಂದೆ ಜೆಡಿಎಸ್‍ನಲ್ಲಿ ಗುರುತಿಸಿಕೊಂಡು ರಾಜ್ಯ ಎಸ್‍ಸಿ-ಎಸ್‍ಟಿ ಘಟಕದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಪತ್ನಿ ಗಿರಿಜಾ, ತಂದೆ-ತಾಯಿ, ಸಹೋದರರು ಹಾಗೂ ಬಂಧು-ಬಳಗದವರ ರೋದನ ಮುಗಿಲು ಮಟ್ಟಿತ್ತು.
ಬಂದೋಬಸ್ತ್: ಪಟ್ಟಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments