ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾದ ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿಸಲು ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.13- ಕಾಡುಗಳ್ಳ ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾದ ಪೊಲೀಸ್ ಸಿಬ್ಬಂದಿ ಸ್ಮರಣಾರ್ಥ ಚಾಮರಾಜನಗರ ಜಿಲ್ಲೆಯ ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿಸಲು ಸಚಿವ ಎಸ್.ಸುರೇಶ್ ಕುಮಾರ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

1992ರ ಮೇ 21ರ ಮಧ್ಯರಾತ್ರಿ ಪೊಲೀಸ್ ಸಿಬ್ಬಂದಿ ಇಳಂಗೋವನ್, ಗೋವಿಂದರಾಜು, ಸಿದ್ದರಾಜು, ರಾಚಪ್ಪ, ಪ್ರೇಮ್‍ಕುಮಾರ್ ಅವರು ಹನೂರು ತಾಲ್ಲೂಕಿನ ರಾಮಾಪುರ ಹಳೆಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವೀರಪ್ಪನ್ ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸರು ಹತರಾಗಿದ್ದರು.

ಈ ಠಾಣೆಯ ಆವರಣದಲ್ಲಿ ಈ ಐವರು ಪೊಲೀಸರ ಸ್ಮಾರಕವನ್ನು ನಿರ್ಮಿಸಿದರೆ ಸಮಾಜಕ್ಕೆ ನಾವು ಸಕಾರಾತ್ಮಕವಾದ ಸಂದೇಶ ನೀಡಬಹುದು ಈ ಸಂಬಂಧ ಈಗಾಗಲೇ ಚಾಮರಾಜನಗರ ಪೆಪೊಲೀಸರಿಗೆ ಮೌಖಿಕ ಸೂಚನೆ ನೀಡಿದ್ದರೂ ಈ ಕೆಲಸ ವೇಗವಾಗಿ ಪೂರ್ಣಗೊಳ್ಳಲು ತುರ್ತು ಸೂಚನೆ ನೀಡುವಂತೆ ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ಫೆ.11ರಂದು ಈ ಠಾಣೆಗೆ ಭೇಟಿ ಕೊಟ್ಟಿದ್ದೆವು. ಠಾಣೆಯ ಶಿಥಿಲ ಕಟ್ಟಡದೊಳಗೆ ಕಾಲಿಟ್ಟ ಕೂಡಲೇ ಹತಭಾಗ್ಯ ಪೊಲೀಸರ ನೆನಪು ಕಾಡಿತು. ವೀರಪ್ಪನ್ ಕ್ರೌರ್ಯದ ವಿರುದ್ದ ಹೋರಾಡಿ ಪ್ರಾಣತೆತ್ತ ಪೊಲೀಸರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸನ್ ನೆನಪಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಆ ಕಾರಣದಿಂದ ಇಂದಿಗೂ ಸಾಮಾಜಿಕ ಕಳಕಳಿ ಹೊಂದಿದ್ದ ಅವರನ್ನು ಜೀವಂತವಾಗಿಟ್ಟಿದೆ. ಅದೇ ರೀತಿ ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿಸಬೇಕಿದೆ ಎಂದು ಹೇಳಿದ್ದಾರೆ.

Facebook Comments