ಕೊರೋನಾ ಕುರಿತು ರಮೇಶ್ ಅರವಿಂದ್ ಏನ್ ಹೇಳ್ತಾರೆ..? ಇಲ್ಲಿದೆ ವಿಶೇಷ ಸಂದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

-ಎನ್.ಎಸ್.ರಾಮಚಂದ್ರ
ಕೊರೊನಾ ಹೆಮ್ಮಾರಿಯ ಭೀಕರತೆ ಕಡಿಮೆ ಆಗುತ್ತಿಲ್ಲ. ಇದರ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇದೆ. ಈ ದಿನಗಳಲ್ಲಿ ಸಾರ್ವಜನಿಕರು ಧೈರ್ಯ, ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಆ ವ್ಯಾಧಿಯ ಹೆಸರು ಕೇಳಿದರೇ ಭಯ-ಭೀತರಾಗುವಂತಹ ಸ್ಥಿತಿ. ಇದು ಬಹಳ ಅಪಾಯಕಾರಿ.

ಜನರ ಮನದಲ್ಲಿ ಬೇರೂರಿರುವ ಅಂಜಿಕೆಯನ್ನು ದೂರ ಮಾಡಿ ಆತ್ಮಸ್ತೈರ್ಯ ತುಂಬಬೇಕಾಗಿದೆ. ಹೆಸರಾಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಈ ಕೆಲಸ ಮಾಡಲು ಮುಂದಾಗಿದ್ದಾರೆ. ಅವರು ಇದರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಅವರು ಈ ಸಂಜೆಗೆ ನೀಡಿರುವ ವಿವರ ಹೀಗಿದೆ:
ರಾಯಭಾರಿಯಾಗಿ ನೇಮಕಗೊಂಡಿರುವ ನಿಮಗೆ ಏನನ್ನಿಸುತ್ತದೆ?

ನಾನು ಮೊದಲಿನಿಂದ ಇಂಥ ಕೆಲಸಗಳಿಗೆ ಸ್ಪಂದಿಸುತ್ತ ಬಂದಿದ್ದೀನಿ. ತ್ಯಾಜ್ಯ ವಿಂಗಡಣೆ ವಿಷಯವಾಗಿ 15 ವರ್ಷಗಳ ಹಿಂದೆಯೇ ನಡೆಸಿದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆಗಿನಿಂದ ಬೆಂಗಳೂರಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ನಾನು ಜತೆಗಿದ್ದೇನೆ.

ಕೊರೊನಾ ವಿಷಯದಲ್ಲಿ ನಾವು ಏನು ಮಾಡಬಹುದು? ಜನರಿಗೆ ಯಾವ ರೀತಿ ಧೈರ್ಯ ತುಂಬಬಹುದು ಅನ್ನೋ ಪ್ರಯತ್ನ ಪ್ರಾರಂಭವಾಗಿದೆ. ಈ ಸಂಬಂಧ ಈಗಿನ್ನೂ ಒಂದು ವಿಡಿಯೋ ಬಿಡುಗಡೆ ಮಾಡಿದ್ದೀನಿ. ತುಂಬಾ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ.

ನಾನು ನೋಡಿದ ಹಾಗೆ ಸಾರ್ವಜನಿಕರು ಕೊರೊನಾ ವಿಷಯದಲ್ಲಿ ಅನಗತ್ಯವಾಗಿ ಬಹಳ ಹೆದರುತ್ತಿದ್ದಾರೆ. ಅದರ ಆವಶ್ಯಕತೆ ಇಲ್ಲ. ನಾನು ಇದನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಿದ್ದೇನೆ. ಈ ಸಂಬಂಧ ಸೋಂಕು ರೋಗ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೇನೆ.

ನನಗೆ ವಿಜ್ಞಾನದಲ್ಲಿ ಆಸಕ್ತಿ ಇರುವುದರಿಂದ ನಾನಾಗಿಯೇ ಕೆಲವು ಸಂಗತಿ ಕಂಡುಕೊಂಡಿದೀನಿ. ಇದನ್ನೆಲ್ಲ ಬೆರೆಸಿ, ಆ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಪ್ರಾರಂಭಿಸಿದೀನಿ. ಸಕಾರಾತ್ಮಕ ವಿಷಯಗಳನ್ನಷ್ಟೇ ಹೇಳುವ ಉದ್ದೇಶ. ವೈರಸ್ ವಿರುದ್ಧ ಹೋರಾಡುವುದು ನಮ್ಮ ಈಗಿನ ಆದ್ಯತೆ.

ಕೊರೊನಾಗೆ ಒಳಗಾಗುವುದಿರಲಿ, ಅದರ ಹೆಸರು ಕೇಳಿದರೆ ಜನ ಭಯಭೀತರಾಗುತ್ತಿದ್ದಾರಲ್ಲವೆ?
ನಿಜ, ಇದಕ್ಕೂ ಮೊದಲೇ ಇಂತಹ ಹಲವು ಸಾಂಕ್ರಾಮಿಕ ರೋಗಗಳು ಬಂದು ಹೋಗಿವೆ. ಕೊರೊನಾ ಒಂದು ಬಂದಿತ್ತಂತೆ, ನಮ್ಮ ಅಜ್ಜಿ, ತಾತ ತುಂಬಾ ಕಷ್ಟ ಪಟ್ಟರಂತೆ ಅಂತ ನಮ್ಮ ಮೊಮ್ಮಕ್ಕಳು ಮiÁತನಾಡಿಕೊಳ್ಳುವ ಕಾಲ ಬರುತ್ತೆ.

ಸಿಡುಬು, ಪ್ಲೇಗ್ ಮುಂತಾದ ಭೀಕರ ವ್ಯಾಧಿಗಳ ವಿಷಯ ಈಗಿನ ಜನರಿಗೆ ಗೊತ್ತೇ ಇಲ್ಲ. ಹಲವು ದಶಕಗಳ ಹಿಂದೆ ಇಂತಹ ಸೋಂಕುಗಳು ವಿಪರೀತ ತೊಂದರೆ ಕೊಟ್ಟಿದ್ದವು. ನಾವು ಈಗ ಕೊರೊನಾ ಕಾಲಘಟ್ಟದಲ್ಲಿದೀವಿ. ಇದಕ್ಕೊಂದು ವ್ಯಾಕ್ಸಿನ್ ಅಂತ ಬಂದುಬಿಟ್ಟರೆ ಎಲ್ಲ ಸರಿಹೋಗುತ್ತದೆ. ಎಬೋಲಾ ವೈರಸ್ ಬಂದಾಗ ಜನ ಭಯಭೀತರಾಗಿರಲಿಲ್ಲವೆ?

ನಾವು ಈ ಯುಗದಲ್ಲಿರೋದು ನಮ್ಮ ಪುಣ್ಯ. ಈಗ ತಂತ್ರಜ್ಞಾನ ಮುಂದುವರಿದಿದೆ. ಕೊರೊನಾ ವೈರಸ್ ಬಂದಿದೆ ಅಂತ ಕ್ಷಣಮಾತ್ರದಲ್ಲಿ ಇಡೀ ಜಗತ್ತಿಗೇ ತಿಳಿದುಹೋಯಿತು. ಎಲ್ಲರೂ ಜಾಗೃತರಾದರು. ಈಗ ಇಡೀ ಜಗತ್ತೇ ನಮ್ಮೊಂದಿಗಿದೆ. ಹಾಗಾಗಿ ಆತಂಕ ಪಡಬೇಕಾಗಿಲ್ಲ.

ಈ ಹಿಂದೆ ಬಂದು ಹೋದ ಸೋಂಕುಗಳಿಗೆ ಹೋಲಿಸಿದರೆ ಕೊರೊನಾದ ಭೀಕರತೆ ಏನೇನೂ ಅಲ್ಲ. ನಮ್ಮ ಪೂರ್ವಿಕರು ವಿಪರೀತ ಕಷ್ಟಪಟ್ಟಿದ್ದಾರೆ. ಕೊರೊನಾ ಅನ್ನೋದು ಸಾಧಾರಣ ಫ್ಲೂ ಥರ. ಶೇ.95ರಷ್ಟು ಜನ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಬಹಳ ವೇಗವಾಗಿ ಹರಡುತ್ತಿರುವುದೊಂದೇ ದೊಡ್ಡ ಚಿಂತೆ.

ಕೊರೊನಾ ಭಯದಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತಂಕಕಾರಿ ಸಂಗತಿಯಲ್ಲವೆ?
ನಿಜ, ಜನರ ಮನಸ್ಥಿತಿ ಆ ಹಂತದವರೆಗೂ ಹೋಗಿದೆ ಅನ್ನುವುದನ್ನು ಕಲ್ಪನೆ ಮಾಡಿಕೊಳ್ಳೋದೂ ಕಷ್ಟ. ಸಣ್ಣ ಹೆದರಿಕೆ ಇರೋದು ಸಹಜ. ಆದರೆ, ಇಲ್ಲಸಲ್ಲದ ವಿಷಯಗಳನ್ನು ತಲೆನಲ್ಲಿ ತುಂಬಿಕೊಂಡು ಆತ್ಮಹತ್ಯೆಗೆ ಮುಂದಾಗುತ್ತಾರೆ.

ಒಂಟಿತನ ಇದಕ್ಕೆ ಮುಖ್ಯ ಕಾರಣ. ಈ ಮನೋಭಾವವನ್ನು ನಿವಾರಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ಸಾಧಾರಣ ಜ್ವರ ಬಂದರೂ ಕೂಡ ಜನ ಹೆದರುತ್ತಿದ್ದಾರೆ. ಅದು ಬೇಕಿಲ್ಲ. ಜ್ವರದ ವಷಧಿ ತೆಗೆದುಕೊಂಡರೆ ಸಾಕು. ಅದನ್ನು ಬಿಟ್ಟು ನನಗೆ ಪ್ರಾಣಾಪಾಯ ಆಗಿದೆ ಅಂತ ಹೆದರಬಾರದು. ಜ್ವರ ಬಂದರೆ ಬಾಡಿ ಫೈಟ್ ಮಾಡುತ್ತೆ.

# ಸಿನಿಮಾದ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?
ಈಗ ಜಗತ್ತು ಬದಲಾಗಿದೆ. ಮೊದಲಿದ್ದ ಹಾಗಿಲ್ಲ. ಹೊಸ ಜಗತ್ತಿನ ನಿಯಮಗಳಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ತದೆ. ಸಿನಿಮಾನೂ ಅಷ್ಟೇ. ಜೀವನ ಅನ್ನೋದು ನಾವಂದುಕೊಂಡ ಹಾಗೆ ನಡೆಯುವುದಿಲ್ಲ. ಏನಾಗುತ್ತದೆಯೋ ಅದೇ ಜೀವನ. ವಾಸ್ತವತೆಯೇ ಬದುಕು.

ಸಿನಿಮಾ ಬಗ್ಗೆ ನನಗೆ ನೂರಾರು ಆಸೆ ಇತ್ತು. ಅಭಿನಯ, ನಿರ್ದೇಶನದ ಕನಸು ಕಂಡಿದ್ದೆ. ಆದರೆ, ಯಾವುದೂ ಆಗಲಿಲ್ಲ. ಪರಿಸ್ಥಿತಿಯ ಕೈಗೊಂಬೆ ಆಗಿದೀನಿ. ಅದಕ್ಕೆ ಹೊಂದಿಕೊಂಡು ಹೋಗಬೇಕು ಅಷ್ಟೆ.
ಇಂದಲ್ಲ ನಾಳೆ ಎಲ್ಲ ಸರಿಹೋಗುತ್ತದೆ.

ಸದ್ಯಕ್ಕಂತೂ ಕಷ್ಟ. ಒಳ್ಳೇ ಬರಗಾರರು, ಕಲಾವಿದರಿಗೆ ಕೆಲಸ ಇರುತ್ತೆ. ಇಲ್ಲದಿದ್ದರೆ ಇನ್ನೊಂದು ಮಾರ್ಗ. ಒಟ್ಟಿನಲ್ಲಿ ಎಲ್ಲ ಸಹಜ ಸ್ಥಿತಿಗೆ ಬರಬೇಕು. ಅದು ನಮ್ಮ ಆಶಯ.

ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಾರಂಭಿಸಿರುವ ಈ ಅಭಿಯಾನದಡಿ ರಮೇಶ್ ಅವರು ಪಾಲ್ಗೊಂಡು ಸಾರ್ವಜನಿಕರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜನರಿಗೆ ತಪ್ಪು ಕಲ್ಪನೆ, ಅನಗತ್ಯ ಹೆದರಿಕೆ ಇದೆ. ಅದನ್ನು ಹೋಗಲಾಡಿಸಬೇಕು ಎಂದು ರಮೇಶ್ ಹೇಳುತ್ತಾರೆ.

Facebook Comments

Sri Raghav

Admin