ಗೌಪ್ಯ ಸ್ಥಳದಲ್ಲಿ ಬೆಂಬಲಿಗರ ಜೊತೆ ರೆಬಲ್ ರಮೇಶ್ ಮೀಟಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarakihole----0-1

ಬೆಂಗಳೂರು,ಡಿ.26-ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಸದ್ಯಕ್ಕೆ ಯಾರ ಕೈಗೂ ಸಿಗದೆ ಗೌಪ್ಯ ಸ್ಥಳದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸದ್ಯಕ್ಕೆ ಕಾಂಗ್ರೆಸ್‍ನ ಯಾವುದೇ ನಾಯಕರ ಜೊತೆ ಮಾತುಕತೆ ಇಲ್ಲವೇ ಸಂಧಾನಕ್ಕೆ ಸಿದ್ದವಿರದ ರಮೇಶ್ ಜಾರಕಿಹೊಳಿ ಇಂದು ಸಂಜೆಯೊಳಗೆ ತಮ್ಮ ಆಪ್ತರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಕಳೆದ ಭಾನುವಾರ ನಾಲ್ಕು ದಿನದೊಳಗೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇನೆ. ನನ್ನ ಜೊತೆ ಯಾರು ಬರಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದಷ್ಟೇ ಹೇಳುವ ಮೂಲಕ ಕುತೂಹಲ ಕೆರಳಿಸಿದ್ದರು.

ಇತ್ತ ಯಡಿಯೂರಪ್ಪ ಕೂಡ ಬೆಳಗಾವಿ ತೆರಳುತ್ತಿರುವುದು ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಸಾಕಷ್ಟು ರೆಕ್ಕೆಪುಕ್ಕ ಬಂದಿದೆ.   ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಅಧಿವೇಶನದ ವೇಳೆ ಮಹಂತೇಶ್‍ಕವಟಗಿ ಮಠ ಏರ್ಪಡಿಸಿದ್ದ ಔತಣಕೂಟದಲ್ಲಿ ರಮೇಶ್ ಜಾರಕಿಹೊಳಿ ಭಾಗವಹಿಸಿದ್ದರು. ಅಂದು ರಾಜ್ಯ ಬಿಜೆಪಿ ನಾಯಕರ ಜೊತೆ ಅವರ ಮಾತುಕತೆ ನಡೆಸುವ ಮೂಲಕ ಕಾಂಗ್ರೆಸ್ ಬಿಡಲಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದರು.

ಕಳೆದ ಮೂರು ದಿನಗಳಿಂದ ರಮೇಶ್‍ಜಾರಕಿಹೊಳಿ ಜೊತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಲು ನಿರಂತರವಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಜಾರಕಿಹೊಳಿ ಸಹೋದರರ ರಾಜಕೀಯ ಗುರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್‍ನ ಒಂದು ಡಜನ್ ನಾಯಕರು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಹಠಮಾರಿ ಸ್ವಭಾವದ ಜಾರಕಿಹೊಳಿ ಸಾಮಾನ್ಯವಾಗಿ ಒಂದು ಬಾರಿ ಕಠಿಣ ನಿರ್ಧಾರ ಕೈಗೊಂಡರೆ ಪುನಃ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಆಪ್ತರೇ ಹೇಳುತ್ತಾರೆ. ಈಗಾಗಲೇ ಕಾಂಗ್ರೆಸ್ ಬಿಡಲು ತೀರ್ಮಾನಿಸಿರುವ ರಮೇಶ್ ಆಪ್ತರ ಜೊತೆ ಮಾತುಕತೆ ನಡೆಸಿ ಶಾಸಕ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಇದೇ ವೇಳೆ ಯಡಿಯೂರಪ್ಪ ಬೆಳಗಾವಿ ತೆರಳುತ್ತಿರುವುದು ದೋಸ್ತಿ ಸರ್ಕಾರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಶತಾಯಗತಾಯ ಬಿಜೆಪಿಗೆ ಜಾರಕಿಹೊಳಿಯನ್ನು ತಂದರೆ ಕಾಂಗ್ರೆಸ್‍ನಲ್ಲಿರುವ ಅವರ ಬೆಂಬಲಿಗರು ಪಕ್ಷಕ್ಕೆ ಬರಬಹುದೆಂಬ ಲೆಕ್ಕಚಾರ ಕಮಲ ನಾಯಕರದ್ದು. ಹೀಗಾಗಿಯೇ ಸಚಿವ ಸಂಪುಟ ವಿಸ್ತರಣೆಯಾದ ನಂತರ ಎಲ್ಲವನ್ನೂ ಮೌನದಿಂದಲೇ ನೋಡುತ್ತಿದ್ದ ಬಿಜೆಪಿ ಈಗ ತೆರೆಮರೆ ಮೂಲಕ ಭಿನ್ನಮತೀಯರಿಗೆ ಗಾಳ ಹಾಕುತ್ತಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin