ಬಳ್ಳಾರಿ ಉಪಚುನಾವಣೆ ಉಸ್ತುವಾರಿಯಾಗಿ ರಮೇಶ್‍ ಜಾರಕಿಹೊಳಿ ಜಾಗಕ್ಕೆ ಟಿ.ರಘುಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarakihole

ಬೆಂಗಳೂರು, ಅ.26- ಬಳ್ಳಾರಿ ಜಿಲ್ಲೆಯ ಉಪಚುನಾವಣೆ ಕಣದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ನಿರಾಸಕ್ತಿ ತೋರಿದ ಸಚಿವ ರಮೇಶ್‍ ಜಾರಕಿಹೊಳಿ ಅವರನ್ನು ಉಸ್ತುವಾರಿಯಿಂದ ಬದಲಾವಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ವಿಧಾನಸಭಾ ಕ್ಷೇತ್ರ ಉಸ್ತುವಾರಿಯನ್ನು ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿತ್ತು. ಅವರು ಒಂದೆರಡು ದಿನ ಕಾಟಾಚಾರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವುದಕ್ಕಿಂತಲೂ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಂದಿದ್ದರು. ಇದು ಪಕ್ಷಕ್ಕೆ ಹೆಚ್ಚು ಹಾನಿ ಉಂಟು ಮಾಡಿತ್ತು.

ಅನಂತರ ರಮೇಶ್‍ಜಾರಕಿಹೊಳಿ ಕ್ಷೇತ್ರದತ್ತ ಕಾಲಿಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಕೂಡ್ಲಗಿ ಕ್ಷೇತ್ರಕ್ಕೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ರಮೇಶ್‍ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದವರಾಗಿದ್ದರಿಂದ ಅವರನ್ನು ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ, ರಮೇಶ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟಿನಿಂದಾಗಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸಚಿವ ಡಿ.ಕೆ.ಶಿವಕುಮಾರ್ ಅವರು ಚುನಾವಣೆ ಉಸ್ತುವಾರಿಗೆ ನೇಮಕವಾಗಿ ಕೆಲಸ ಮಾಡದೇ ಇರುವ ಕಾಂಗ್ರೆಸ್ ನಾಯಕರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಚುನಾವಣೆ ಬಳಿಕ ಕೆಪಿಸಿಸಿ ಮತ್ತು ಹೈಕಮಾಂಡ್‍ಗೆ ವರದಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

Facebook Comments