ಸರ್ಕಾರಕ್ಕೆ ಶಾಕ್ ನೀಡುವ ತಯಾರಿಯಲ್ಲಿ ಅತೃಪ್ತರು, ದಿನ ಕಳೆದಂತೆ ದೋಸ್ತಿಗೆ ಹೆಚ್ಚಿದ ತಳಮಳ.. !

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಮೇ 26- ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಬಂಡಾಯ ಶಾಸಕರ ಚಟುವಟಿಕೆಗಳು ಗರಿಗೆದರಿವೆ.

ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಅಖಾಡಕ್ಕಿಳಿ ದಿರುವ ಕೈ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಸಡ್ಡು ಹೊಡೆದು ನಿಂತಿದ್ದು, ಇನ್ನಷ್ಟು ಅತೃಪ್ತರೊಂದಿಗೆ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅತೃಪ್ತಿಗೊಂಡಿರುವ ಶಾಸಕರಾದ ಮಹೇಶ ಕುಮಟಳ್ಳಿ, ಸೀಮಂತ ಪಾಟೀಲ್, ನಾಗೇಂದ್ರ, ಕಂಪ್ಲಿ ಗಣೇಶ, ಬಿ.ಸಿ.ಪಾಟೀಲ, ಡಾ.ಸುಧಾಕರ, ಲಿಂಗೇಶ್, ಆನಂದ್‍ಸಿಂಗ್, ಶಿವರಾಮ್ ಹೆಬ್ಬಾರ್, ಜೆಡಿಎಸ್‍ನ ನಾರಾಯಣಗೌಡ ಮತ್ತಿತರರನ್ನು ರಮೇಶ್ ಜಾರಕಿಹೊಳಿ ಸಂಪರ್ಕಿಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಅವರಲ್ಲಿ ಬಹುತೇಕ ಮಂದಿ ಆಪರೇಷನ್ ಕಮಲಕ್ಕೆ ಕೈ ಜೋಡಿಸಲು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  ಅತೃಪ್ತ ಶಾಸಕರನ್ನೆಲ್ಲ ಗೋವಾದಲ್ಲಿರಿಸಲು ಸಿದ್ಧತೆಗಳು ನಡೆದಿವೆ. ನಿನ್ನೆ ರಾತ್ರಿ ದಿಢೀರ್ ಗೋವಾಕ್ಕೆ ತೆರಳಿದ ರಮೇಶ್ ಜಾರಕಿ ಹೊಳಿ ಅತೃಪ್ತ ಶಾಸಕರ ವಾಸ್ತವ್ಯ ಮತ್ತು ಸುರಕ್ಷತೆಯ ಪರಿಶೀಲನೆ ನಡೆಸಿ ಇಂದು ಬೆಳಗ್ಗೆ ಬೆಂಗಳೂರಿಗೆ ಮರಳಿದರು.

ಮತ್ತೆ ಇಂದು ರಾತ್ರಿ ರಮೇಶ್ ಜಾರಕಿ ಹೊಳಿ ಗೋವಾಕ್ಕೆ ತೆರಳಲಿದ್ದು, ಅವರೊಂದಿಗೆ ಕೆಲ ಶಾಸಕರು ಗೋವಾ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಜೂನ್ 3ರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ, ಅತ್ತ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ಸ್ಕೆಚ್ ರೆಡಿಯಾಗಿದೆ.

ಈ ಮೊದಲು ಸಮ್ಮಿಶ್ರ ಸರ್ಕಾರದ ಪತನಕ್ಕಾಗಿ ಬಿಜೆಪಿ ಒಮ್ಮೆ ಹರಿಯಾಣದ ರೆಸಾರ್ಟ್‍ನಲ್ಲಿ ತನ್ನೆಲ್ಲ ಶಾಸಕರನ್ನು ಇರಿಸಿಕೊಂಡು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸಿತ್ತು. ಮತ್ತೊಮ್ಮೆ ರಮೇಶ್ ಜಾರಕಿ ಹೊಳಿ ಮತ್ತು ಅವರ ತಂಡ ಮುಂಬೈ ಹೊಟೇಲ್‍ನಲ್ಲಿ ತಂಗಿ ಸರ್ಕಾರದ ಪತನಕ್ಕೆ ಪ್ರಯತ್ನಿಸಲಾಗಿತ್ತು. ಅದಲ್ಲದೆ, ಮೂರ್ನಾಲ್ಕು ಬಾರಿ ಆಪರೇಷನ್ ಕಮಲದ ವಿಫಲ ಪ್ರಯತ್ನ ನಡೆಸಲಾಗಿದೆ.

ಈ ಬಾರಿ ನಿರ್ಣಾಯಕ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ಕೂಡ ಗ್ರೀನ್‍ಸಿಗ್ನಲ್ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ತಾವು ನೇರವಾಗಿ ಕಾಣಿಸಿಕೊಳ್ಳದೆ ಕಾಂಗ್ರೆಸ್‍ನ ಅತೃಪ್ತರನ್ನೇ ಮುಂಚೂಣಿಗೆ ಬಿಟ್ಟಿದ್ದಾರೆ. ರಮೇಶ್‍ಜಾರಕಿ ಹೊಳಿ ಹಾಗೂ ಇತರ ಅತೃಪ್ತರು ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತರನ್ನು ಸೆಳೆದು ರೆಸಾರ್ಟ್‍ನತ್ತ ಕರೆದುಕೊಂಡು ಹೋಗಲಿದ್ದಾರೆ.

ಇಂದಿನ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಅತೃಪ್ತ ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಸರಿಸುಮಾರು 10 ರಿಂದ 12 ಮಂದಿ ಶಾಸಕರು ಬಿಜೆಪಿ ಜೊತೆ ಕೈ ಜೋಡಿಸಲು ಒಪ್ಪಿರುವುದಾಗಿ ಮಾಹಿತಿ ಇದೆ. ಗೋವಾಕ್ಕೆ ತೆರಳುವ ಅತೃಪ್ತ ಶಾಸಕರಿಗಾಗಿ ಗೋವಾ ತಾಜ್ ಹಾಲಿಡೇ ವಿಲೇಜ್ ಹೋಟೆಲ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸದ್ಯದ ಮಾಹಿತಿ ಪ್ರಕಾರ 15 ದಿನಗಳವರೆಗೆ ರೆಸಾರ್ಟ್ ರಾಜಕೀಯ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ರಮೇಶ್ ಆಂಡ್ ಟೀಂ ಸಭೆ ನಡೆಸಿ ಗೋವಾದಲ್ಲಿ ತಾಜ್ ಹಾಲಿಡೇ ವಿಲೇಜ್ ಫೈವ್ ಸ್ಟಾರ್ ಹೊಟೇಲ್‍ನಲ್ಲಿ 30 ರೂಮ್ ಬುಕ್ ಮಾಡಿ ಗೋವಾಕ್ಕೆ ಹೋಗುವ ತೀರ್ಮಾನ ಮಾಡಿದ್ದರು.

ಗೋವಾದ ಫೋರ್ಟ್ ಅಗೋಡಾದಲ್ಲಿರುವ ಐಷಾರಾಮಿ ಪೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದರಿಂದ ದೊಸ್ತಿ ಸರಕಾರದಲ್ಲಿ ಮತ್ತೆ ಆತಂಕ ಸೃಷ್ಠಿಸಿದೆ. ಮತ್ತೊಂದೆಡೆ ಸರಕಾರ ಉಳಿಸಿಕೊಳ್ಳಲು ದೋಸ್ತಿ ಪಕ್ಷಗಳು ಕಸರತ್ತು ನಡೆಸುತ್ತಿವೆ.

ಇನ್ನು ಜೂನ್ ಮೊದಲ ವಾರದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕನಸು ಕಾಣುತ್ತಿದೆ. ಈ ಗೋವಾ ಅಪರೇಷನ್ ಕಮಲ ವರ ನೀಡಿ ಯಶಸ್ಸು ನೀಡುತ್ತಾ ಎಂದು ಕಾದು ನೋಡಬೇಕಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ