ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ

ಈ ಸುದ್ದಿಯನ್ನು ಶೇರ್ ಮಾಡಿ

ಹಿರಿಯೂರು , ಮೇ.14- ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಭಂದ ಎಲ್ಲಾ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಟನಲ್ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗೂಳಿಹೊಸಹಳ್ಳಿಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ ಪ್ರಗತಿಗೆ ಪರಿವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ ಎಂಬ ವಿಷಯ ತಿಳಿಸಿದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ಅನುದಾನ ಬರಲಿದ್ದು, ಕಾಮಗಾರಿ ವೇಗ ಹೆಚ್ಚಿ, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ ಅಗತ್ಯ ಹಣಕಾಸಿನ ವ್ಯವಸ್ಥೆ ದೊರೆಯಲಿದೆ ಎಂದರು.

2008 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದರು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಪ್ರದೇಶದ ಅಡಚಣೆಯಿಂದಾಗಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆದುಕೊಂಡಿಲ್ಲ, ಎಲ್ಲ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಪ್ಯಾಕೇಜ್ 8,9, ರಲ್ಲಿ 7,5 ಕಿ.ಮೀ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮುಕ್ತಾಯದ ಹಂತದಲ್ಲಿದೆ.

ಇನ್ನೂ 300 ಮೀಟರ್ ಮಾತ್ರ ಬಾಕಿ ಉಳಿದಿದೆ. ಅದನ್ನೂ ಜುಲೈ 15 ರೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ. ಮುಂದಿನ ಜೂನ್ ಒಳಗೆ 48 ಕೆರೆಗಳಿಗೆ ನೀರು ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

Facebook Comments

Sri Raghav

Admin