ಗೋಕಾಕದಲ್ಲಿ ಪ್ರಾಭಲ್ಯ ಮೆರೆದ ರಮೇಶ್, ಸತೀಶ್-ಲಕ್ಷ್ಮೀಗೆ ಮುಖಭಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.9- ಉಪ ಚುನಾವಣೆ ನಡೆದ ಜಿಲ್ಲೆಗಳ ಪೈಕಿ ಎರಡನೇ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿದ್ದ ಬೆಳಗಾವಿ ಜಿಲ್ಲೆಯ ನಾಯಕತ್ವ ಬಿಜೆಪಿಯ ಮುಂದೆ ಮಂಡಿಯೂರುವಂತಹ ಪರಿಸ್ಥಿತಿಗೆ ಬಂದಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಬೆಳಗಾವಿ ಜಿಲ್ಲೆಯಿಂದಲೇ ಮುನ್ನುಡಿ ಆರಂಭವಾಯಿತು. ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಸಹಕಾರ ಬ್ಯಾಂಕ್‍ನ ಚುನಾವಣೆಗೆ ಸಂಬಂಧಪಟ್ಟಂತೆ ಆರಂಭವಾದ ಆಂತರಿಕ ಸಂಘರ್ಷ ಕೊನೆಗೆ ಉಚ್ಛ್ರಾಯ ಸ್ಥಿತಿಗೆ ತಲುಪಿ ಕೊನೆಗೆ ಸಚಿವರಾಗಿದ್ದ ರಮೇಶ್‍ಜಾರಕಿಹೊಳಿ ಮಧ್ಯ ಪ್ರವೇಶ ಮಾಡಬೇಕಾಯಿತು.

ರಮೇಶ್ ಜಾರಕಿಹೊಳಿ ಮಧ್ಯ ಪ್ರವೇಶದ ನಂತರ ಇದು ಬೇರೆಯೇ ಸ್ವರೂಪ ಪಡೆದು ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಜಿದ್ದಾಜಿದ್ದಿಯನ್ನು ಬಯಲಿಗೆ ತಂದಿತ್ತು. ಲಕ್ಷ್ಮಿಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್‍ನ ಕೆಲ ನಾಯಕರು ಬೆಂಬಲ ನೀಡುತ್ತಿದ್ದಾರೆ.

ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡ ರಮೇಶ್‍ಜಾರಕಿಹೊಳಿ ಸಚಿವರಾಗಿದ್ದರೂ ಸಂಪುಟ ಸಭೆಗೆ ಹಾಜರಾಗದೆ, ಸರ್ಕಾರದ ಕೆಲಸಗಳನ್ನೂ ಮಾಡದೆ ತಮ್ಮ ಪಾಡಿಗೆ ತಾವಿದ್ದರು. ಈ ಕಾರಣಕ್ಕಾಗಿ ರಮೇಶ್‍ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಸಂಪುಟದಿಂದ ಕೈ ಬಿಟ್ಟು ಸತೀಶ್ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಿತ್ತು. ಇಲ್ಲಿಂದ ಆರಂಭವಾದ ಬೇಗುದಿ ಕೊನೆಗೆ ಸಮ್ಮಿಶ್ರ ಸರ್ಕಾರವನ್ನು ಮನೆಗೆ ಕಳುಹಿಸುವವರೆಗೂ ನಿಲ್ಲಲಿಲ್ಲ.

ಕಾಂಗ್ರೆಸ್ ಪಾಲಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣ ಭಾರೀ ಸವಾಲಾಗಿತ್ತು. ಗೋಕಾಕ್‍ನ ರಮೇಶ್‍ಜಾರಕಿಹೊಳಿ, ಅಥಣಿಯ ಮಹೇಶ್‍ಕುಮಟಳ್ಳಿ, ಕಾಗವಾಡದ ಶ್ರೀಮಂತ್ ಪಾಟೀಲ್ ಅವರುಗಳನ್ನು ಸೋಲಿಸಬೇಕೆಂದು ಕೆಲ ನಾಯಕರು ಹಠಕ್ಕೆ ಬಿದ್ದಿದ್ದರು.

ಹೀಗಾಗಿಯೇ ಚುನಾವಣೆಯ ಉಸ್ತುವಾರಿಯನ್ನು ಜಿಲ್ಲೆಯ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ವಹಿಸಲಾಗಿತ್ತು. ಲಕ್ಷ್ಮೀಹೆಬ್ಬಾಳ್ಕರ್ ಅವರಂತೂ ಸ್ಟಾರ್ ಪ್ರಚಾರಕರಾಗಿ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದರು. ಕನಿಷ್ಠ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ನಿರೀಕ್ಷೆಗಳಿದ್ದವು.

ಆದರೆ, ಹೊರ ಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್‍ಗೆ ಮುಖಭಂಗ, ಪಕ್ಷ ದ್ರೋಹ, ಆಪರೇಷನ್ ಕಮಲ ಈ ಎಲ್ಲಾ ಆರೋಪಗಳನ್ನು ಜನ ತಿರಸ್ಕರಿಸಿ ಮತ್ತೆ ರಮೇಶ್‍ಜಾರಕಿಹೊಳಿ, ಮಹೇಶ್‍ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಅವರನ್ನೇ ಗೆಲ್ಲಿಸುವ ಮೂಲಕ ರಾಜಕಾರಣದ ಹೊಸ ಭಾಷ್ಯ ಬರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವಾರು ಮಂದಿ ನಾಯಕರು ಜಿಲ್ಲೆಯಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಜನ ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲಗೊಳಿಸಿದ್ದಾರೆ. ಈ ಮೂಲಕ ಬಿಜೆಪಿ ಉತ್ತರ ಕರ್ನಾಟಕ ಭಾಗದ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ.

Facebook Comments

Sri Raghav

Admin