ಭಾರೀ ಕುತೂಹಲ ಮೂಡಿಸಿದೆ ಜಾರಕಿಹೊಳಿ ಸುದ್ದಿಗೋಷ್ಠಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.27- ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಸಂಜೆ ನಡೆಸಲಿರುವ ಪತ್ರಿಕಾಗೋಷ್ಠಿ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಸಂಜೆ 4 ಗಂಟೆಗೆ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ಸಿಡಿ ಪ್ರಕರಣ ಕುರಿತಾಗಿ ಕೆಲವು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಡಿಟೆಕ್ಟರ್‍ರಿಂದ ರಮೇಶ್ ಜಾರಕಿ ಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹೋದರರು ಪ್ರಕರಣ ಕುರಿತಾಗಿ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಇದನ್ನೇ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಈ ಮೊದಲೇ ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಒಟ್ಟು 15 ಷಡ್ಯಂತ್ರಗಳನ್ನು ಬಯಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಮಹಾನಾಯಕನೊಬ್ಬನ ಪಾತ್ರವಿದೆ ಎಂದು ಅವರು ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇಂದು ಅವರ್ಯಾರು ಎಂಬುದು ಬಹಿರಂಗವಾಗಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ ಇಂದು ಸಂಜೆ 4 ಗಂಟೆಯಿಂದ 6 ಗಂಟೆಯೊಳಗೆ ದೊಡ್ಡ ಬಾಂಬ್ ಸಿಡಿಸಲಿದ್ದೇನೆ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದರು. ಮೂರು ದಿನಗಳ ಹಿಂದೆ ಮಾತನಾಡಿದ್ದ ರಮೇಶ್ ಜಾರಕಿಹೊಳಿ ನನ್ನ ಜೇಬಿನಲ್ಲಿರುವ ದಾಖಲೆಯನ್ನು ಬಿಡುಗಡೆ ಮಾಡಿದರೆ ಶಾಕ್ ಆಗುತ್ತೀರಿ ಎಂದು ಹೇಳಿದ್ದರು. ಈಗ ಸಂಜೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಯಾರ್ಯಾರ ಹೆಸರುಗಳು ಆಚೆಗೆ ಬರಲಿವೆ ಎಂಬುದನ್ನು ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ.

Facebook Comments