ಸಿಡಿ ಪ್ರಕರಣ : ಬಂಧನದ ಭೀತಿಯಲ್ಲಿ ಸಾಹುಕಾರ್‌..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.31-ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಯುವತಿ ನ್ಯಾಯಾಧೀಶರ ಮುಂದೆ ಸ್ವಇಚ್ಚೆ ಹೇಳಿಕೆ ನೀಡಿರುವ ಕಾರಣ, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಎದುರಾಗಿದೆ. ವಿಶೇಷ ತನಿಖಾ ತಂಡ(ಎಸ್‍ಐಟಿ) ಯಾವುದೇ ಕ್ಷಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಬಹುದೆಂಬ ಭೀತಿಯಿಂದಾಗಿ ಮುಂದಿನ ಕಾನೂನು ಕ್ರಮಗಳ ಕುರಿತಂತೆ ವಕೀಲರ ಜೊತೆ ಜಾರಕಿಹೊಳಿ ಸಹೋದರರು ಚರ್ಚೆ ನಡೆಸಿದ್ದಾರೆ.

ನಿನ್ನೆ ತಮ್ಮ ಸ್ವಕ್ಷೇತ್ರ ಗೋಕಾಕ್‍ಗೆ ತೆರಳಿ ಅಲ್ಲಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆದ ನಂತರ ರಮೇಶ್ ಜಾರಕಿಹೊಳಿ ಹಾಗೂ ಸಹೋದರ ಬಾಲಚಂದ್ರ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಮೂಲಗಳ ಪ್ರಕಾರ ಇಬ್ಬರು ಸಹೋದರರು ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಎಫ್‍ಐಆರ್ ರದ್ದತಿ ಕೋರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕೆ? ಇಲ್ಲವೆ ತಕ್ಷಣ ಜಾಮೀನು ಕೋರಿ ಅರ್ಜಿ ಹಾಕಬೇಕೆ ಎಂಬುದರ ಬಗ್ಗೆ ವಕೀಲರಿಂದ ಸಲಹೆ ಪಡೆಯುತ್ತಿದ್ದಾರೆ.

ದೆಹಲಿಯಿಂದ ನಾಲ್ವರು ಖ್ಯಾತ ವಕೀಲರು ಹಾಗೂ ರಾಜ್ಯದ ಇಬ್ಬರು ಪ್ರಖ್ಯಾತ ವಕೀಲರನ್ನು ನೇಮಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಜಾಮೀನು ಪಡೆಯಬೇಕು ಇಲ್ಲವೇ ಎಫ್‍ಐಆರ್ ರದ್ದತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಬೇಕೆ ಎಂಬುದರ ಕುರಿತಂತೆ ನಿರಂತರವಾಗಿ ಕಾನೂನು ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯಷ್ಟೆ ಯುವತಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣ ಕುರಿತಾಗಿ ಸ್ವ ಇಚ್ಛೆ ಹೇಳಿಕೆ ನೀಡಿದ್ದರು.

ಸಿಆರ್‍ಪಿಸಿ ಕಲಂ 164ರಡಿ ಸ್ವಇಚ್ಛೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಕಾಡುತ್ತಿದೆ. ನಿರೀಕ್ಷಣಾ ಜಾಮೀನು ಬೇಡ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಯುವತಿ ಹೇಳಿಕೆ ನೀಡಿಲ್ಲ ಎಂದು ಸುಮ್ಮನಿದ್ದರು. ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರ ಜೊತೆ ಸರ್ಕಾರವನ್ನೇ ಬೀಳಿಸಿದ್ದೇನೆ ಇದು ಯಾವ ಮಹಾಎಂಬ ಮಾತಿನಿಂದ ಮತ್ತೊಂದು ಸಂಕಷ್ಟ ಬಂದಿದೆ.

ಈ ಹಿಂದೆ ತಮ್ಮ ಹೇಳಿಕೆಯಲ್ಲಿ ನಾವೇ ಡಿಟೆಕ್ಟಿವ್ ಏಜೆನ್ಸಿಗಳ ಮೂಲಕ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಹೇಳಿದ್ದರು. ಆದರೆ ಸಂಸ್ಥೆ ಕೊನೆಯವರೆಗೂ ಯುವತಿ ಎಲ್ಲಿದ್ದಾರೆ ಮತ್ತು ಈಕೆಯ ಜೊತೆ ಇದ್ದವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಪತ್ತೆ ಹಚ್ಚಲು ವಿಫಲವಾಗಿತ್ತು. ಯುವತಿ ಕಾನೂನು ಹೋರಾಟ ಮಾಡುತ್ತಿದ್ದರೂ ಜಾರಕಿಹೊಳಿ ತಂಡ ಅದಕ್ಕೆ ಪ್ರತಿಯಾಗಿ ಯಾವುದೇ ಕಾನೂನು ಹೋರಾಟ ಮಾಡದೇ ಸುಮ್ಮನಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗ ನನ್ನ ಬಳಿ 11 ಪ್ರಮುಖ ಸಾಕ್ಷ್ಯಗಳು ಇವೆ. ಅದನ್ನು ಎಸ್‍ಐಟಿಗೆ ನೀಡುತ್ತೇನೆ ಎಂದು ಹೇಳಿದ್ದರು.

ಈಗಾಗಲೇ ಜಾರಕಿಹೊಳಿ ಬಹಿರಂಗವಾಗಿಯೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಯುವತಿಯ ಹೇಳಿಕೆ ಆಧಾರದ ಮೇಲೆ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆಯಿದೆ. ಆದರೆ ಈಗ ಯುವತಿ ಹೇಳಿಕೆ ನೀಡಿದ ಬಳಿಕ ಮುಂದೆ ನಿರೀಕ್ಷಣಾಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಬಳಿಕ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದು ಮಾಡುವ ಬಗ್ಗೆಯೂ ಅರ್ಜಿ ಸಲ್ಲಿಸಬಹುದು.

ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಆದರೆ ಅದರಲ್ಲಿ ಯಾರನ್ನೂ ಸಹ ಶಂಕಿತ ಆರೋಪಿಗಳು ಎಂದು ಹೆಸರು ಉಲ್ಲೇಖಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಡಿ ಯುವತಿಯನ್ನು ವಿಚಾರಣೆ ನಡೆಸಬಹುದು.

Facebook Comments