ರಮೇಶ್ ಜಾರಕಿಹೊಳಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಏ.5- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಅವರನ್ನು ಗೋಕಾಕ್‍ನ ತಾಲ್ಲೂಕು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿದ್ದುದರಿಂದ ರಮೇಶ್ ಜಾರಕಿಹೊಳಿ ಅವರು ಮಾ.31ರಂದು ಆಸ್ಪತ್ರೆಗೆ ಬಂದಿದ್ದರು.

ಆಂಟಿಜನ್ ಪರೀಕ್ಷೆ ಮಾಡಿದಾಗ ಅವರಿಗೆ ಸೋಂಕು ಇರುವುದು ಖಚಿತವಾಗಿತ್ತು. ಚಿಕಿತ್ಸೆ ನೀಡಿ ಹೋಮ್ ಕ್ವಾರಂಟೈನಲ್ಲಿರಲು ಕಳುಹಿಸಲಾಗಿತ್ತು.ಉಸಿರಾಟದ ಸಮಸ್ಯೆ ಇದ್ದುದರಿಂದ ನಿನ್ನೆ ರಾತ್ರಿ 10.30ಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ರಕ್ತದೊತ್ತಡ ಮತ್ತು ಮಧುಮೇಹದ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಪ್ರವಾಸ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲೆಲ್ಲ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ನಾವು ಇಲ್ಲಿ ಪರೀಕ್ಷೆ ಮಾಡಿದ್ದೆವು. ಸೋಂಕು ಇರುವುದು ಖಚಿತವಾಗಿದೆ.

ಇನ್ನು ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಕೊರೊನಾ ಚಿಕಿತ್ಸೆಗಾಗಿ ಸ್ಥಾಪಿಸಿರುವ ಪ್ರತ್ಯೇಕ ವಾರ್ಡ್‍ನಲ್ಲಿ ಅವರನ್ನು ಇರಿಸಲಾಗಿದೆ ಎಂದು ಹೇಳಲಾಗಿದೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರ ಕಾರು ಚಾಲಕ ಮತ್ತು ಅಡುಗೆ ಭಟ್ಟನಿಗೂ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

Facebook Comments