ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬದಲಾವಣೆ, ಶೀಘ್ರವೇ ರೈತರಿಗೆ ಪರಿಹಾರ : ಸಚಿವ ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11-ನೀರಾವರಿ ಯೋಜನೆಗಳ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಶೀಘ್ರವೇ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನಕ್ಕೆ ದರ ನಿಗದಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.

ನಾಳೆ ಮೇಕೆದಾಟುಗೆ ಹೋಗಿ ಖುದ್ದು ನಾನೇ ಸ್ಥಳ ಪರಿಶೀಲಿಸುತ್ತೇನೆ. ಮತ್ತೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.  ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಗ್ರಾಮಗಳು ಮುಳುಗಡೆಯಾಗುವ ವಿಚಾರ, ತಾಂತ್ರಿಕ ಸಮಿತಿ ರಚಿಸಿದ್ದು, ಜಲಾಶಯದ ಎತ್ತರ ಹೆಚ್ಚಳ ಬಗ್ಗೆ ಪರಿಶೀಲನೆ ಮಾಡಿ ಸಿಎಂ ದೆಹಲಿಗೆ ಹೋಗಲು ದಿನಾಂಕ ನಿಗದಿ ಮಾಡುತ್ತಾರೆ ಎಂದರು.

ಆರ್ಥಿಕ ಇಲಾಖೆಯಲ್ಲಿ ಸಮಸ್ಯೆ ಇದೆ. ಸಾಲ ಮಾಡಿಯಾದರೂ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಮೇಕೆ ದಾಟು 9000 ಕೋಟಿ ರೂ ಯೋಜನೆಯಾಗಿದೆ. 60 ಟಿಎಂಸಿ ಅಡಿನೀರು ಸಂಗ್ರಹ ಗುರಿ ಇದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಎತ್ತಿನ ಹೊಳೆ ಯೋಜನೆಗೆ ರೈತರು ಜಮೀನು ನೀಡಿದ್ದಾರೆ. ಮುಂದಿನ ಜೂನ್ ಹೊತ್ತಿಗೆ ಮೊದಲ 30 ಕಿ ಮಿ ವರೆಗೆ ನೀರು ಹರಿಸಲಾಗುವುದು ಎಂದು ಹೇಳಿದರು.

ಜಿಎಸ್ ಟಿ ಹಣ ಕೇಂದ್ರದಿಂದ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಸಿಎಂ ಮೊನ್ನೆ ಮೀಟಿಂಗ್ ಮಾಡಿದ್ದಾರೆ. ಎಷ್ಟೇ ಕಷ್ಟ ಆದ್ರೂ ಸಾಲ ಮಾಡಿ ಆದ್ರೂ ಕೆಲಸಗಳು ಆಗಬೇಕು ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ಕುಡಿಯೋದಕ್ಕೆ ನೀರು, ಪವರ್ ಪ್ರಾಜೆಕ್ಟ್ ಕೂಡ ಇದೆ. ಮತ್ತೊಂದು ದಿನ ಸಭೆ ನಡೆಸಿ ಸಂಪೂರ್ಣ ವಿವರ ಕೊಡ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.

Facebook Comments