ತಮ್ಮದೇ ಮಿತ್ರಮಂಡಳಿ ವಿರುದ್ಧ ಸಾಹುಕಾರ್ ಗರಂ..!
ಬೆಂಗಳೂರು,ನ.28-ನಿನ್ನೆ ರಾತ್ರಿ ಸಚಿವರು ಹಾಗೂ ಶಾಸಕರು ಖಾಸಗಿ ಹೋಟೆಲ್ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಸರಿಯಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಇಲ್ಲವೇ ಪಕ್ಷದ ಕಚೇರಿಯಲ್ಲೇ ನಡೆಯಬೇಕು. ಹೀಗೆ ಪ್ರತ್ಯೇಕವಾಗಿ ಸಭೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈಗಲೂ ಕೂಡ ಅವರೆಲ್ಲರೂ ನನ್ನ ಸ್ನೇಹಿತರೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಮುಂದೆ ಈ ರೀತಿ ಸಭೆಗಳು ನಡೆಯಬಾರದು. ಪ್ರತ್ಯೇಕ ಸಭೆಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕಬೇಕು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ನಾನು ನಾಯಕ ಎಂದು ಎಲ್ಲಿಯೂ ಹೇಳಿಲ್ಲ. ಜಲಸಂಪನ್ಮೂಲ ಸಚಿವನಾಗಿರುವ ಕಾರಣ ಕೆಲವರು ಮನೆಗೆ ಬಂದು ಹೋಗುತ್ತಾರೆ. ಯಾರಿಗೂ ಕೂಡ ಬೇಡ ಎನ್ನಲು ಸಾಧ್ಯವಿಲ್ಲ. ನಾನು 17 ಶಾಸಕರ ನಾಯಕನಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾರಾದರೂ ಒಡಕು ಸೃಷ್ಟಿಸಲು ಯತ್ನಿಸಿದರೆ ಅವರು ಯಶಸ್ವಿಯಾಗುವುದಿಲ್ಲ. ನಾನು ಯಾರನ್ನೂ ಮಂತ್ರಿ ಮಾಡುವಷ್ಟು ದೊಡ್ಡ ನಾಯಕನಲ್ಲ. ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೊಡಿಸುವುದು ನನ್ನ ಜವಾಬ್ದಾರಿ ಅದನ್ನು ಕೊಡಿಸಿಯೇ ತೀರುತ್ತೇನೆ ಎಂದು ವಾಗ್ದಾನ ಮಾಡಿದರು.
ಇಲಾಖೆಯ ಕಾರ್ಯನಿಮಿತ್ತ ದೆಹಲಿಗೆ ಭೇಟಿ ಕೊಟ್ಟಿದ್ದೆ. ಕೇಂದ್ರ ಸಚಿವರನ್ನು ಭೇಟಿಯಾದಂತೆ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದೇನೆ. ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ.ರವಿ ಅವರು ನನ್ನನ್ನು ಆಹ್ವಾನಿಸಿದ್ದರಿಂದ ಹೋಗಿದ್ದೆ. ಇದರಲ್ಲಿ ವಿಶೇಷತೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಂಪುಟ ವಿಸ್ತರಣೆ ಕುರಿತಂತೆ ಮಾತನಾಡಿದ ಅವರು ಇದನ್ನು ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಇದರಲ್ಲಿ ನನ್ನ ಹಸ್ತಕ್ಷೇಪ ಇಲ್ಲ ಎಂದು ಹೇಳಿದರು.
2023ರವರೆಗೆ ನಾನು ಯಾವುದೇ ರೀತಿಯ ಗುಂಪುಗಾರಿಕೆ ನಡೆಸೊಲ್ಲ. ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿ ನಂಬಿಕೆಯಿಟ್ಟಿದೆ. ನಾನು ಒಬ್ಬನೇ ದೆಹಲಿಗೆ ಹೋಗಿರಲಿಲ್ಲ. ನನ್ನಂತೆ ಅನೇಕರು ಬಂದಿದ್ದರು. ಇದರಲ್ಲಿ ವಿಶೇಷತೆ ಏನಿದೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಪ್ರಯತ್ನಕ್ಕೆ ವಿಡಿಯೋ ಕಾರಣ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾವ ಸಚಿವರ ವಿಡಿಯೋ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಮುಂದೆ ಇದನ್ನು ನೋಡಿಕೊಳ್ಳೋಣ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳು ಎರಡುಮೂರು ದಿನಗಳಲ್ಲಿ ಆಗಲಿದೆ ಎಂದು ಹೇಳಿದ್ದಾರೆ. ನನಗೆ ಅವರ ಮಾತಿನಲ್ಲಿ ನಂಬಿಕೆಯಿದೆ. ಹೈಕಮಾಂಡ್ ನಿರ್ಧಾರ ಅಥವಾ ವರಿಷ್ಠರ ತೀರ್ಮಾನದ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.