15 ದಿನಗಳೊಳಗಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ: ಸಚಿವ ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.28-ಉತ್ತರ ಕರ್ನಾಟಕ ಭಾಗದ ಜನರ ಹೋರಾಟ ಮತ್ತು ರಾಜ್ಯ ಸರ್ಕಾರದ ಕಾನೂನು ಸಮರಕ್ಕೆ ಪ್ರತಿಫಲ ಸಿಕ್ಕಿದ್ದು, ನಿನ್ನೆ ಕೇಂದ್ರ ಸರ್ಕಾರ ಮಹದಾಯಿ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇನ್ನು 15 ದಿನಗಳೊಳಗಾಗಿ ಕಳಸಾ ಬಂಡೂರಿ ಅಣೆಕಟ್ಟುಗಳ ನಿರ್ಮಾಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.

ತುರ್ತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪನವರ ನಾಯಕತ್ವದಲ್ಲಿ ಸಚಿವರುಗಳು, ರಾಜ್ಯ ಸರ್ಕಾರದ ಅಧಿಕಾರಿಗಳ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವ ಬೈರೋನ್‍ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬೆನ್ನ ಹಿಂದೆಯೇ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಮಹದಾಯಿ ನ್ಯಾಯಾಧೀಕರಣ ಕರ್ನಾಟಕಕ್ಕೆ 13.42 ಟಿಎಂಸಿ, ಗೋವಾಕ್ಕೆ 33.395 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಮಹದಾಯಿ ತೀರ್ಪಿಗೆ ತಕರಾರು ತೆಗೆದು ಮಹಾರಾಷ್ಟ್ರ, ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಇದೇ ತಿಂಗಳ 20 ರಂದು ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದ್ದು, ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆದೇಶ ನೀಡಿತ್ತು. ಅದರಂತೆ ಅಧಿಸೂಚನೆ ಜಾರಿಯಾಗಿದ್ದು, ಕಳಸಾ ಬಂಡೂರಿ ಅಣೆಕಟ್ಟುಗಳ ನಿರ್ಮಾಣಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ಕೊಡುವುದಾಗಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಕಳಸಾ ಬಂಡೂರಿ ಅಣೆಕಟ್ಟುಗಳ ನಿರ್ಮಾಣಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ ತಯಾರಿಸಲಾಗಿದೆ. ಅದನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕೂಡಲೇ ಯೋಜನೆ ಕೈಗೆತ್ತಿಕೊಳ್ಳಲು ಕ್ರಮಕೈಗೊಳ್ಳಲಾಗುವುದು. ಯೋಜನೆ ಆರಂಭಕ್ಕೆ ಕೇಂದ್ರಸರ್ಕಾರದಿಂದ ಮೂರು ರೀತಿಯ ಅನುಮತಿಗಳ ಅಗತ್ಯವಿದೆ. ಅದಕ್ಕೂ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು.

ರಾಜ್ಯದ ಬಜೆಟ್‍ನಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು ಎಂದು ಹೇಳಿದರು.ಯೋಜನೆ ಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಸಾರ್ವಜನಿಕರು, ಮಾಧ್ಯಮದವರು ಸಹಕಾರ ನೀಡಬೇಕು. ಒಂದು ವೇಳೆ ಗೋವಾ ಸರ್ಕಾರ ತಕರಾರು ಅರ್ಜಿ ಸಲ್ಲಿಸಿದರೆ ಮಾತುಕತೆಗೆ ಮನವೊಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಒಟ್ಟಿನಲ್ಲಿ 15 ದಿನಗಳೊಳಗಾಗಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಮಗ್ರ ಸಿದ್ಧತೆಗಳನ್ನು ಹೊಸ ರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ಮಹದಾಯಿ ಹೋರಾಟಗಾರರ ಮೇಲೆ ದಾಖಲಿಸಲಾಗಿರುವ ವಿವಿಧ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಮೊದಲಿನಿಂದಲೂ ನಮ್ಮ ಒತ್ತಾಯವಿತ್ತು. ಈಗ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವೇ ಪ್ರಕರಣಗಳನ್ನು ಹಿಂಪಡೆಯಲು ಕ್ರಮಕೈಗೊಳ್ಳಲಾಗುವುದು. ನಾವೀಗ ಸಂಭ್ರಮಾಚರಣೆಯಲ್ಲಿ ಮೈಮರೆಯುವುದು ಬೇಡ. ಯೋಜನೆ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕಿದೆ. ಅತ್ಯಂತ ಸೂಕ್ಷ್ಮವಾಗಿ ಸನ್ನಿವೇಶವನ್ನು ನಿಭಾಯಿಸಬೇಕಿದೆ ಎಂದು ಹೇಳಿದರು.

ಕಾವೇರಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾನೂನಿನ ಹೋರಾಟದಲ್ಲಿ ಅಂತಿಮ ಘಟ್ಟ ತಲುಪಿದ್ದೇವೆ. ಅದೇ ರೀತಿ ಕೃಷ್ಣಾ ಹೋರಾಟದಲ್ಲೂ ನ್ಯಾಯಾಧೀಕರಣದ ತೀರ್ಪು ಬಂದಿದೆ. ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಗತ್ಯ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

Facebook Comments