“ಲಖನ್ ನನ್ನ ಸಹೋದರನಲ್ಲ, ನನ್ನ ಶತ್ರು” : ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.15- ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ಸಹೋದರನಲ್ಲ. ರಾಜಕೀಯ ವಿರೋಧಿ ಎಂದು ರಮೇಶ್ ಜಾರಕಿಹೊಳಿ ಖಡಕ್ಕಾಗಿ ಹೇಳಿದ್ದಾರೆ.ಬಿಜೆಪಿ ಸೇರಿದ ನಂತರ ತಮ್ಮ ಸ್ವಕ್ಷೇತ್ರ ಗೋಕಾಕ್‍ಗೆ ಆಗಮಿಸುವ ಸಂದರ್ಭದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 5ರವರೆಗೂ ಲಖನ್ ನನ್ನ ರಾಜಕೀಯ ವಿರೋಧಿ ಎಂದರು.

ರಾಜಕಾರಣದಲ್ಲಿ ನಮಗೆ ಸಹೋದರ ಸಂಬಂಧ ಇರುವುದಿಲ್ಲ. ರಾಜಕೀಯವಾಗಿ ಲಖನ್ ನನ್ನ ವಿರೋಧಿಯೇ ಆಗಿದ್ದಾನೆ. ಯಾರದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಕಣಕ್ಕಿಳಿದಿದ್ದಾನೆ. ಅವನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು. ಒಂದು ಮತವಾಗಲಿ, ಒಂದು ಲಕ್ಷ ಮತವಾಗಲಿ ಕ್ಷೇತ್ರದಲ್ಲಿ ಗೆಲುವು ನನ್ನದೆ. ಕಾರ್ಯಕರ್ತರು, ಬೆಂಬಲಿಗರು ಎಲ್ಲರೂ ನಮ್ಮ ಪರವಾಗಿದ್ದಾರೆ ಎಂದು ತಿಳಿಸಿದರು.

ಕಳೆದ 15 ದಿನಗಳಿಂದ ಬಿಜೆಪಿ ಸೇರ್ಪಡೆ ಬಗ್ಗೆ ನಾನು ಯಾವುದೇ ರೀತಿ ಹೇಳಿಕೆ ನೀಡಿರಲಿಲ್ಲ. ನನ್ನ ವಿರೋಧಿಗಳು ನನ್ನ ಸೋಲಿಗೆ ಪ್ರಯತ್ನಿಸಬಹುದು. ಕಾನೂನಿನ ಮೂಲಕ ಕಟ್ಟಿ ಹಾಕುವ ಪ್ರಯತ್ನ ಮಾಡಬಹುದು. ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ನನಗಿದೆ ಎಂದರು. ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೌದು ಅದು ಸತ್ಯ. ನಾನು ಅವರ ಶಿಷ್ಯ ಅಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ನನಗೆ ಜ್ಯೂನಿಯರ್ ಎಂದು ತಿರುಗೇಟು ನೀಡಿದ್ದಾರೆ.

ನನಗೆ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್‍ನಲ್ಲಿ ಗುರುಗಳು ಎಂದು ಅವರು ತಿಳಿಸಿದ್ದಾರೆ. ಆರ್. ಶಂಕರ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಎದುರು ಎರಡೆರಡು ರೀತಿ ಮಾತನಾಡಿದ್ದಕ್ಕೆ ಟಿಕೆಟ್ ಮಿಸ್ಸಾಗಿದೆ. ಅವರನ್ನು ಎಂಎಲ್‍ಸಿ ಮಾಡಿಸುವುದು ನನ್ನ ಜವಾಬ್ದಾರಿ ಎಂದರು.

Facebook Comments