ಸಿಎಂ ಬಿಎಸ್‌ವೈ ನಿವಾಸಕ್ಕೆ ಭೇಟಿ ನೀಡಿದ ಜಾರಕಿಹೊಳಿ ಸಹೋದರರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.15- ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಬೆಳಗ್ಗೆ ಆಗಮಿಸಿದ ಈ ಇಬ್ಬರು ಸಹೋದರರು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಸುಮಾರು 20 ನಿಮಿಷಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದರು.

ಮಾತುಕತೆಯ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲವಾದರೂ ಇತ್ತೀಚಿನ ಕೆಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಇಬ್ಬರ ಭೇಟಿ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಒಂದೆಡೆ ಮಾಜಿ ಸಚಿವ ಉಮೇಶ್ ಕತ್ತಿ ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವುದು, ಮತ್ತೊಂದೆಡೆ ತಮ್ಮ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಮಹತ್ವದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ.

ಈ ಹಿಂದೆ ಕುಮಟಳ್ಳಿಗೆ ಎಂಎಸ್‍ಐಎಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಆ ಸ್ಥಾನವನ್ನು ಒಪ್ಪಿಕೊಳ್ಳದ ಅವರು ಭೂ ಸೇನಾ ನಿಗಮ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕುಮಟಳ್ಳಿಗೆ ಅಧಿವೇಶನ ಆರಂಭವಾಗುವ ಮೊದಲೇ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಇದಲ್ಲದೆ ರಮೇಶ್ ಜಾರಕಿಹೊಳಿ ತಮ್ಮ ಇಲಾಖೆಗೆ ವಿಶೇಷ ಕರ್ತವ್ಯ ಅಧಿಕಾರಿ(ಓಎಸ್‍ಡಿ) ನೇಮಕಾತಿ ಮಾಡಿಕೊಳ್ಳುವ ವಿಷಯದಲ್ಲೂ ವಿವಾದವಾಗಿತ್ತು. ಹೀಗಾಗಿ ಈ ಎಲ್ಲ ವಿವಾದಕ್ಕೆ ಸುಖಾಂತ್ಯ ಹಾಡಲು ಜಾರಕಿಹೊಳಿ ಸಹೋದರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Facebook Comments