ನಾಳೆ ಕೇಂದ್ರ ಸಚಿವರನ್ನು ಭೇಟಿಯಾಗಲಿರುವ ಸಚಿವ ರಮೇಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.25- ಮಹದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಮಂಡಳಿ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಲು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ರಜಾಕಿಹೊಳಿ ನಾಳೆ ಭೇಟಿ ಮಾಡಲಿದ್ದಾರೆ.

ನಾಳೆ ಬೆಳಗ್ಗೆ ಶೇಖಾವತ್‍ಅವರನ್ನು ಭೇಟಿಯಾಗಿ, ಶೀಘ್ರವೇ ಮಹದಾಯಿ ನ್ಯಾಯಮಂಡಳಿಯ ತೀರ್ಪಿಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೋರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಅದೇ ದಿನ ಸಂಜೆ ಜಲ ವಿವಾದ ಕುರಿತು ಸುಪ್ರೀಂಕೋರ್ಟ್‍ನಲ್ಲಿ ವಾದ ಮಾಡುವ ರಾಜ್ಯದ ವಕೀಲರ ತಂಡದೊಂದಿಗೆ ಸಭೆ ನಡೆಸಲು ಸಚಿವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಸುಪ್ರೀಂಕೋರ್ಟ್ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಗೋವಾ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶೀಘ್ರವೇ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಚಿವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.  ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗುವ ಕುರಿತು ಸಿಎಂ ಬಿ.ಎಸ್.ವೈ ಅವರೊಂದಿಗೆ ಸಮಾಲೋಚನೆ ನಡೆಸಿ, ನಂತರ ನಿರ್ಧಾರ ಕೈಗೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments