ಮಹದಾಯಿ-ಕೃಷ್ಣಾ ವಿವಾದ : ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26-ಮಹದಾಯಿ ಮತ್ತು ಕೃಷ್ಣಾ ನದಿ ನೀರಿನ ಅಂತಾರಾಜ್ಯ ನದಿ ವಿವಾದಗಳಲ್ಲಿ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಕುರಿತು ಕೂಡಲೇ ಅಧಿಸೂಚನೆ ಹೊರಡಿಸಬೇಕು ಮತ್ತು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಅನುಮತಿ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿ ಹೊಳಿ ಅವರು ಪ್ರಮುಖ ವಿಷಯಗಳನ್ನು ಕೇಂದ್ರ ಸಚಿವರ ಮುಂದೆ ಮಂಡಿಸಲು ಸಹಕಾರ ನೀಡಲು ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ಕುಡಿಯುವ ನೀರಿನ ಯೋಜನೆಗೆ ಅನುಕೂಲವಾಗುವಂತೆ ರೂಪಿಸಲಾಗಿರುವ ಮೇಕೆದಾಟು ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಅನುಮತಿಗಳು ಸಿಗಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿತ್ತು. ಆದರೆ ಇದ್ದಕ್ಕಿದ್ದಂತೆ ಅದನ್ನು ರದ್ದುಪಡಿಸಲಾಗಿದೆ. ಕೂಡಲೇ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದ್ದಾರೆ. ಮಹದಾಯಿ ನದಿ ವಿವಾದದಲ್ಲಿ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಅನುಸಾರ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಕರ್ನಾಟಕ ಪಾಲಿನ 13.42 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಸುಪ್ರೀಂ ಅನುಮತಿ ನೀಡಿದೆ. ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ರಮೇಶ್ ಜಾರಕಿ ಹೊಳಿ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಗೋವಾ ಸರ್ಕಾರ ಈ ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದು, ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಮಾತನ್ನಾಡುತ್ತಿದೆ. ವಿವಿಧ ರೀತಿಯಲ್ಲಿ ರಾಜಕೀಯ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದೆ. ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕಾದರೆ ಮಹದಾಯಿ ನ್ಯಾಯಾಧೀಕರಣ ತೀರ್ಪಿಗೆ ಅಧಿಸೂಚನೆ ಹೊರಡಿಸಬೇಕೆಂದು ರಮೇಶ್ ಜಾರಕಿ ಹೊಳಿ ಮನವಿ ಮಾಡಿದ್ದಾರೆ.

ಅದೇ ರೀತಿ ಕೃಷ್ಣಾ ನ್ಯಾಯಾಧೀಕರಣದಲ್ಲಿ 907 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದ ರಾಯಚೂರು, ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಜಲಾನಯನ ಯೋಜನೆಗಳಿಗೆ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ವರದಾನವಾಗಿದೆ. ಕೂಡಲೇ ಅಂತಿಮ ತೀರ್ಪನ್ನು ಆಧರಿಸಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದಾರೆ.

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್‍ನಿಂದ 524 ಮೀಟರ್‍ಗೆ ಹೆಚ್ಚಿಸಲು ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಆಂಧ್ರಪ್ರದೇಶ ಇದಕ್ಕೆ ತಕರಾರು ತೆಗೆದಿದೆ. ಕೂಡಲೇ ಇದನ್ನು ನಿವಾರಿಸಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Facebook Comments