ಕಳಸಾ ಬಂಡೂರಿ ನಾಲಾ ಪ್ರದೇಶಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಫೆ.29- ಮಹದಾಯಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ನಾಲಾ ಪ್ರದೇಶದ ಕಣಕುಂಬಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಜಲಸಂಪನ್ಮೂಲ ಸಚಿವರಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ರಮೇಶ್ ಜಾರಕಿಹೊಳಿ ಅವರು ಮಹದಾಯಿ ಹೋರಾಟಗಾರರು, ರೈತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ನ್ಯಾಯಾಲಯದ ವಿವಾದದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಕಳಸಾ ಬಂಡೂರಿ ಕಾಮಗಾರಿಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ನಾಲ್ಕು ದಶಕಗಳ ಕಾಲ ಉತ್ತರ ಕರ್ನಾಟಕ ಭಾಗದ ರೈತರು, ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಜಾರಿ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಶೀಘ್ರ ಕಾರ್ಯ ರೂಪಕ್ಕೆ ತರಬೇಕೆಂದು ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಸಚಿವರು ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಪಾಲಿನ 13.5 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಅಣೆಕಟ್ಟು ನಿರ್ಮಾಣ ವಿದ್ಯುತ್ ಬಳಕೆಗೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲು ಅಗತ್ಯ ಕಾಮಗಾರಿ ಕೈಗೊಳ್ಳುವ ಸಲುವಾಗಿ ಪ್ರಸ್ತುತ ಬಜೆಟ್‍ನಲ್ಲಿ 200 ಕೋಟಿ ರೂ.ಗಳ ಅನುದಾನ ಮೀಸಲಿಡಬೇಕು ಎಂದು ರಮೇಶ್ ಜಾರಕಿಹೊಳಿಯವರು ಮುಖ್ಯಮಂತ್ರಿಯವರಿಗೆ ಈಗಾಗಲೇ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರಲ್ಲದೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ, ನೆನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದೆ. ಈ ನಡುವೆ ಅಧಿಸೂಚನೆಗೆ ತಡೆ ನೀಡಬೇಕೆಂದು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಕಾನೂನು ಹೋರಾಟದ ನಡುವೆ ಕಾಮಗಾರಿಗಳನ್ನು ಕೂಡ ಪ್ರಾರಂಭಿಸಬೇಕಾಗಿದೆ.

Facebook Comments