ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7-ಉಸಿರಾಟದ ತೊಂದರೆ ಹಾಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದ ಅ ಅವರಿಗೆ ಆರೋಗ್ಯ ಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಸದ್ಯ ಹೋಮ್‍ಕ್ವಾರಂಟೈನ್‍ಗೆ ಒಳಗಾಗಿರುವ ಅವರು, ಒಂದು ವಾರದ ಬಳಿಕ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಎಸ್‍ಐಟಿ ವಿಚಾರಣೆಗೆ ಹಾಜರಾಗಬೇಕೆಂದು ಎರಡು ಬಾರಿ ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ಕೊಟ್ಟಿತ್ತು. ಕಳೆದ ಶುಕ್ರವಾರ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಉಸಿರಾಟದಲ್ಲಿ ತೊಂದರೆಯಾಗಿದ್ದರಿಂದ ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿದ್ದರು.

ಹೋಮ್‍ಕ್ವಾರಂಟೈನ್ ಅವಧಿ ಮುಗಿದ ನಂತರ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಒಂದು ಬಾರಿ ಅವರು ವಿಚಾರಣೆಗೆ ಹಾಜರಾಗಿದ್ದರು. ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ತಮ್ಮನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ತಮ್ಮ ಮೇಲೆ ರಮೇಶ್ ಜಾರಕಿಹೊಳಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.

ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಕೊನೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದಂತಹ ಪರಿಸ್ಥಿತಿಯೂ ಎದುರಾಯಿತು. ಈಗಾಗಲೇ ಯುವತಿಯು ನ್ಯಾಯಾಧೀಶರ ಮುಂದೆ ಸ್ವ ಇಚ್ಛೆ ಹೇಳಿಕೆಯನ್ನು ನೀಡಿದ್ದು, ಆಕೆ ಗಂಭೀರ ಆರೋಪ ಮಾಡಿರುವುದರಿಂದ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಎದುರಾಗಿದೆ.

Facebook Comments